ಮಧುರೈ (ತಮಿಳುನಾಡು): ತಮ್ಮ ಬಾಳ ಸಂಗಾತಿ ಗರ್ಭಿಣಿಯಾದರೆ ಆಕೆಗೆ ಸೀಮಂತ ಮಾಡಿಸಿ ಈ ಕ್ಷಣಗಳನ್ನು ಸ್ಮರಣೀಯವಾಗಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ತಮ್ಮ ಮನೆಯಲ್ಲಿದ್ದ ಸಾಕು ಪ್ರಾಣಿಗೆ ಸೀಮಂತ ಮಾಡಿದ್ದು, ಆ ವಿಡಿಯೋ ಸಖತ್ ವೈರಲ್ ಆಗ್ತಿದೆ. ಮಧುರೈನ ಜೈಹಿಂದ್‌ಪುರಂ ಮೂಲದ ಇನ್ಸ್‌ಪೆಕ್ಟರ್ ಶಕ್ತಿವೇಲ್ ತಮ್ಮ ಮನೆಯಲ್ಲಿರುವ ಮುದ್ದಿನ ಸೂಜಿ ಎಂಬ ಸಾಕು ಶ್ವಾನಕ್ಕೆ ಅದ್ಧೂರಿಯಾಗಿ ಸೀಮಂತ ಮಾಡಿ ಗಮನ ಸೆಳೆದಿದ್ದಾರೆ.
ಸೂಜಿ ಗರ್ಭಿಣಿಯಾಗಿರುವ ವಿಷಯ ತಿಳಿದ ಶಕ್ತಿವೇಲ್ ಅದಕ್ಕೆ ಪೆಟ್ ಶವರ್ ಮಾಡಿಸಲು ಪ್ಲಾನ್ ಮಾಡಿದ್ದಾರೆ. ಮೊದಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡ ಬಳಿಕ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರನ್ನು ಆಹ್ವಾನಿಸಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.
ಸೂಜಿ ಕಾಲಿಗೆ ಬಳೆಗಳನ್ನು ತೊಡಿಸಿ, ಬಣ್ಣ ಬಣ್ಣದ ಹೂಗಳಿಂದ ಸಿಂಗಾರ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಆಹ್ವಾನಿತರಿಗೆ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಬಗ್ಗೆ ಮಾತನಾಡಿರುವ ಇನ್ಸ್‌ಪೆಕ್ಟರ್ ಶಕ್ತಿವೇಲ್, ನನಗೆ ಬಾಲ್ಯದಿಂದಲೂ ಶ್ವಾನಗಳೆಂದರೆ ತುಂಬಾ ಇಷ್ಟ. ಹೀಗಾಗಿ ಶ್ವಾನಗಳನ್ನು ಸಾಕುತ್ತಾ ಬಂದಿದ್ದೇವೆ. ಸಾಕುಪ್ರಾಣಿ ಅನ್ನೋದಿಕ್ಕಿಂತ ಹೆಚ್ಚಾಗಿ ಸೂಜಿ ಯಾವಾಗಲೂ ನಮ್ಮ ಕುಟುಂಬದ ಸದಸ್ಯೆ. ನಾವು ಏನು ತಿಂದರೂ ಸಾಕುಪ್ರಾಣಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಹಾಗಾಗಿ ಸೂಜಿ ಗರ್ಭಿಣಿ ಎಂದು ತಿಳಿದಾಗ ಇದಕ್ಕೆ ಸೀಮಂತ ಮಾಡಬೇಕೆಂದು ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆರೆ ಒತ್ತುವರಿ, ಮಾರಾಟಗಾರರಿಗೆ ತಮಿಳುನಾಡು ಸರ್ಕಾರ ಬಿಗ್ ಶಾಕ್; ಜಲಸಂಗ್ರಹ ಪ್ರದೇಶದ ಆಸ್ತಿ ಮೌಲ್ಯ ಶೂನ್ಯ