ಹೈದರಾಬಾದ್(ತೆಲಂಗಾಣ): ಕುಡಿದ ಅಮಲಿನಲ್ಲಿ ಸ್ವಂತ ಮಗನನ್ನೇ ತಂದೆಯೊಬ್ಬ ಅಮಾನವೀಯವಾಗಿ ಥಳಿಸಿದ ಹೀನ ಕೃತ್ಯ ಹೈದರಾಬಾದ್ನ ಓಲ್ಡ್ ಸಿಟಿಯಲ್ಲಿರುವ ಛತ್ರಿನಾಕಾದಲ್ಲಿ ನಡೆದಿದೆ.
ಅಶೋಕ್ ಎಂಬಾತ ಕುಡಿದು ತನ್ನ 8 ವರ್ಷದ ಪುತ್ರನಿಗೆ ಕೋಲಿನಿಂದ ಥಳಿಸಿದ್ದಾನೆ. ಅಷ್ಟೇ ಅಲ್ಲದೆ ಮಗನಿಗೆ ಹೊಡೆಯುವ ವಿಡಿಯೋ ರೆಕಾರ್ಡ್ ಮಾಡುವಂತೆ ಮಗಳಿಗೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಅಣ್ಣನಿಗೆ ಹೊಡೆಯಬೇಡಿ ಎಂದು ಬಾಲಕನ ತಂಗಿ ಎಷ್ಟೇ ಬೇಡಿಕೊಂಡರು ಸಹ ಕುಡುಕ ತಂದೆ ವಿಕೃತಿ ಮೆರೆದಿದ್ದಾನೆ.
ಘಟನೆ ನಡೆದಾಗ ಬಾಲಕನ ತಾಯಿ ಜೀಜಾ ಬಾಯಿ ಮನೆಯಲ್ಲಿ ಇರಲಿಲ್ಲ. ಆಕೆ ಮನೆಗೆ ಬರುವವರೆಗೂ ಕುಡುಕ ತಂದೆ ಬಾಲಕನಿಗೆ ಹೊಡೆಯುತ್ತಲೇ ಇದ್ದ. ಜೀಜಾ ಬಾಯಿ ಮನೆಗೆ ಹಿಂದಿರುಗಿದಾಗ ಮಗನನ್ನು ಅಮಾನುಷವಾಗಿ ಥಳಿಸುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾಳೆ. ಕೋಪಗೊಂಡು ತನ್ನ ಮಗನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾಳೆ.
ಇದನ್ನೂ ಓದಿ: ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಬಳಿ ಭೀಕರ ರಸ್ತೆ ಅಪಘಾತ: ಓರ್ವ ಸಾವು, ಐವರು ಗಂಭೀರ
ಈ ಕುರಿತು ಪತಿ ಅಶೋಕ್ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ತಂದೆ ಅಮಾನುಷವಾಗಿ ಮಗನನ್ನು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟಿಜನ್ ನೀಚ ತಂದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆತನಿಗೆ ಕಠಿಣ ಶಿಕ್ಷೆ ನೀಡುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.