ಭುವನೇಶ್ವರ(ಒಡಿಶಾ): ಬಾಹ್ಯಾಕಾಶದಲ್ಲಿ ದಿನಕ್ಕೊಂದು ವೈಚಿತ್ರ ಸಂಭವಿಸುತ್ತದೆ. ಆದರೆ, ಬಾಹ್ಯಾಕಾಶ ವಿಜ್ಞಾನಿಗಳ ಕಣ್ಣಿಗೆ ಬೀಳುವುದು ಕೆಲವೊಂದು ಮಾತ್ರ. ಇನ್ನೂ ಕೆಲವು ಅದ್ಭುತಗಳಿರುತ್ತವೆ. ಹ್ಯಾಲಿ ಧೂಮಕೇತು 76 ವರ್ಷಗಳಿಗೆ ಒಂದು ಬಾರಿ ಕಾಣಿಸುವಂತೆ, ಸುಮಾರು ವರ್ಷಗಳ ನಂತರ ಈ ವಿದ್ಯಮಾನಗಳು ಪುನರಾವರ್ತನೆಯಾಗುತ್ತವೆ. ಈಗ ಸಾವಿರ ವರ್ಷಗಳಿಗೆ ಒಂದು ಬಾರಿ ಬಾಹ್ಯಾಕಾಶದಲ್ಲಿ ಸಂಭವಿಸಲಿರುವ ಅಪರೂಪದ ವಿದ್ಯಮಾನ ಬಾಹ್ಯಾಕಾಶದಲ್ಲಿ ಸಂಭವಿಸಲಿದ್ದು, ಏಪ್ರಿಲ್ ಕೊನೆಯ ವಾರ ಅಂದರೆ ಪ್ರಸ್ತುತ ಆ ವಿದ್ಯಮಾನ ಜರುಗುತ್ತಿದೆ.
ಸೌರಮಂಡಲದಲ್ಲಿ ಗ್ರಹಗಳು ಸೂರ್ಯನ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿರುತ್ತವೆ. ಅವೆಲ್ಲವೂ ಸೂರ್ಯನ ಸುತ್ತಲೂ ಸುತ್ತಬೇಕಾದರೆ ಬೇರೆ ಬೇರೆ ಸ್ಥಳಗಳಲ್ಲಿ ಇರುತ್ತವೆ. ಆದರೆ, ಈಗ ಸುಮಾರು 4 ಗ್ರಹಗಳು ಸರಳ ರೇಖೆ ಎಳೆದಂತೆ ನೇರವಾಗಿ ಬಂದು ನಿಲ್ಲಲಿವೆ. ಏಪ್ರಿಲ್ 26 ಮತ್ತು 27ರಂದು ಸೂರ್ಯೋದಯಕ್ಕೆ ಒಂದು ಗಂಟೆ ಮುಂಚಿತವಾಗಿ ಶುಕ್ರ, ಮಂಗಳ, ಗುರು ಮತ್ತು ಶನಿ ಒಂದೇ ಸಾಲಿನಲ್ಲಿ ಕಂಡಿವೆ. ಏಪ್ರಿಲ್ 30 ರಂದು ಶುಕ್ರ ಮತ್ತು ಗುರು ಗ್ರಹಗಳನ್ನು ಒಂದೇ ಅಕ್ಕಪಕ್ಕದಲ್ಲಿ ನೋಡಬಹುದು ಎಂದು ಶುಕ್ರ ಗ್ರಹದ 0.2 ಡಿಗ್ರಿ ದಕ್ಷಿಣಕ್ಕೆ ಗುರು ಗ್ರಹ ಕಾಣಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಯಾದ ಸುಭೇಂದು ಪಟ್ನಾಯಕ್ ಹೇಳಿದ್ದಾರೆ.
ಭುವನೇಶ್ವರದ ಪಠಾಣಿ ಸಮಂತಾ ತಾರಾಲಯದ ಉಪನಿರ್ದೇಶಕರಾಗಿರುವ ಸುಭೇಂದು ಪಟ್ನಾಯಕ್ ಈ ಕುರಿತು ಮಾಹಿತಿ ನೀಡಿದ್ದು, ಇದನ್ನು ಪ್ಲಾನೆಟ್ ಪರೇಡ್ ಎಂದು ಕರೆಯಲಾಗುತ್ತದೆ. ಇದನ್ನು ವೈಜ್ಞಾನಿಕವಾಗಿ ಇನ್ನೂ ನಿಖರವಾಗಿ ಹೇಳಲು ಸಾಧ್ಯವಾಗಿಲ್ಲವಾದರೂ, ಸೌರವ್ಯೂಹದ ಗ್ರಹಗಳು ಒಂದೇ ಸಾಲಿನಲ್ಲಿ ಕಂಡು ಬಂದಾಗ ಇದನ್ನು ಸೂಚಿಸಲು ಖಗೋಳಶಾಸ್ತ್ರದಲ್ಲಿ ಪ್ಲಾನೆಟ್ ಪರೇಡ್ ಎಂಬ ಪದವನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎಂದಿದ್ದಾರೆ. ಈ ಪ್ಲಾನೆಟ್ ಪರೇಡ್ನಲ್ಲಿ ಗ್ರಹಗಳ ಸಂಖ್ಯೆ ಮತ್ತು ಅವುಗಳ ಗೋಚರತೆ ಆಧರಿಸಿ, ಮೂರ್ನಾಲ್ಕು ವಿಧಗಳನ್ನ ಗುರ್ತಿಸಲಾಗಿದೆ.
ಒಮ್ಮೊಮ್ಮೆ ಒಂದು ಸಾವಿರಕ್ಕೆ ಒಂದು ಬಾರಿಯೂ ಇಂತಹ ವಿದ್ಯಮಾನವನ್ನು ಕಾಣುವುದು ಕಷ್ಟ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇಂತಹ ವಿದ್ಯಮಾನ ಕ್ರಿಸ್ತ ಶಕ 947ರಲ್ಲಿ ನಡೆದಿತ್ತು ಎನ್ನಲಾಗಿದೆ. ನಾಸಾದ ವರದಿಯೊಂದು ಹೇಳುವಂತೆ ಏಪ್ರಿಲ್ ತಿಂಗಳ ಆರಂಭದಲ್ಲಿ ಮಂಗಳ, ಶುಕ್ರ ಮತ್ತು ಶನಿ ಎಲ್ಲವೂ ಒಂದೇ ಸರಳರೇಖೆಯಲ್ಲಿ ಕಾಣಿಸಿಕೊಂಡಿವೆ. ಆದರೆ, ಈಗ ಗ್ರಹಗಳ ಪಟ್ಟಿಗೆ ಗುರುಗ್ರಹವೂ ಸೇರ್ಪಡೆಯಾಗಿದ್ದು, ಮುಂಜಾನೆ ಇವುಗಳನ್ನು ಬರಿಗಣ್ಣಿನಿಂದ ನೋಡಬಹುದಾಗಿದೆ. ಇವು ಸರಳ ರೇಖೆಯಲ್ಲಿ ಹೊಳೆಯುತ್ತಿರುತ್ತವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಅತ್ಯಪರೂಪದ ಯುವ ನಕ್ಷತ್ರಗಳ ಸಮೂಹ ಪತ್ತೆ ಹಚ್ಚಿದ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳು!