ನವದೆಹಲಿ: ತಮಿಳುನಾಡಿನ ಟುಟಿಕೋರಿನ್ ಮೂಲದ ಸ್ಥಾವರದಲ್ಲಿ ಆಮ್ಲಜನಕ ಉತ್ಪಾದಿಸುವ ಪ್ರಸ್ತಾಪವನ್ನು ವಿರೋಧಿಸಿ ವೇದಾಂತ ಲಿಮಿಟೆಡ್ ಸೋಮವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸ್ಥಾವರವನ್ನು ನಿರ್ವಹಿಸಲು ಪರಿಣಿತ ಇಂಜಿನಿಯರ್‌ಗಳ ಅಗತ್ಯವಿದೆ ಆದರೆ, ರಾಜ್ಯ ಸರ್ಕಾರದ ಎಂಜಿನಿಯರ್ಗೆ ಪರಿಣತಿ ಇಲ್ಲ ಎಂದು ಅದು ವಾದಿಸಿದೆ. ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಅಫಿಡವಿಟ್‌ನಲ್ಲಿ, ಗಣಿಗಾರಿಕೆ ಕಂಪನಿಯು ರಾಜ್ಯದಲ್ಲಿ ಸ್ಥಾವರವನ್ನು ನಡೆಸುವುದು "ಆಸ್ತಿಗಳಿಗೆ ಮಾತ್ರವಲ್ಲದೇ ಉತ್ಪಾದನೆಗೆ ನಿಯೋಜಿಸಲಾದ ಕಾರ್ಮಿಕರಿಗೂ ಗಂಭೀರ ಅಪಾಯವನ್ನುಂಟು ಮಾಡುತ್ತದೆ" ಎಂದು ಹೇಳಿದೆ. ಅಧಿಕ ವೋಲ್ಟೇಜ್ ಉಪಕರಣಗಳು ಬಳಕೆಯಾಗುವುದರಿಂದ ಇದು ಅಪಾಯಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸ್ಥಾವರವನ್ನು ನಡೆಸಲು ಕನಿಷ್ಠ 10 ವರ್ಷಗಳ ಅನುಭವ ಹೊಂದಿರುವ ಸುಮಾರು 45 ತರಬೇತಿ ಪಡೆದ ಉದ್ಯೋಗಿಗಳ ಅಗತ್ಯವಿದೆ ಎಂದು ಅದು ಹೇಳಿದೆ. ಇದಲ್ಲದೇ ತಮಿಳುನಾಡು ಸರ್ಕಾರಕ್ಕೆ ಸಹ ಆಕ್ಸಿಜನ್ ಉತ್ಪಾದನಾ ಕಾರ್ಯವನ್ನು ಆರ್ಥಿಕವಾಗಿ ಬೆಂಬಲಿಸಲು ಸಾಧ್ಯವಾಗುವುದಿಲ್ಲ ಎಂದು ವೇದಾಂತ ಲಿಮಿಟೆಡ್ ಹೇಳಿದೆ.
ಕೋವಿಡ್ 19 ಪ್ರಕರಣಗಳಲ್ಲಿ ಉಲ್ಬಣಗೊಂಡ ಹಿನ್ನೆಲೆ ವೈದ್ಯಕೀಯ ಉದ್ದೇಶಗಳಿಗಾಗಿ ಆಮ್ಲಜನಕವನ್ನು ಉತ್ಪಾದಿಸಲು ವೇದಾಂತ ಸ್ಟರ್ಲೈಟ್ ಸ್ಥಾವರವನ್ನು ಪುನಃ ತೆರೆಯುವ ಪ್ರಕರಣಕ್ಕೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಬಂದಿದೆ. ಈ ಹಿಂದೆ ವೇದಾಂತ ಮನವಿಯನ್ನು ತಮಿಳುನಾಡು ವಿರೋಧಿಸಿತ್ತು ಆದರೆ, ಪರಿಸ್ಥಿತಿ ಕಠೋರವಾಗಿದೆ ಮತ್ತು ದೇಶಕ್ಕೆ ಆಮ್ಲಜನಕದ ಅಗತ್ಯವಿರುವುದರಿಂದ ಉತ್ತರವನ್ನು ನೀಡುವಂತೆ ನ್ಯಾಯಾಲಯ ಹೇಳಿದೆ. ಈ ಪ್ರಕರಣ ಏಪ್ರಿಲ್ 27 ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಪೋಲಿಸ್ ಗುಂಡಿನ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ 2018 ರಲ್ಲಿ ತಾಮ್ರ ಸ್ಥಾವರವನ್ನು ಮುಚ್ಚಲು ಆದೇಶಿಸಿತ್ತು.