ಕೊಯಮತ್ತೂರು (ತಮಿಳುನಾಡು): ವಿಧಾನಸಭೆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದ ದಕ್ಷಿಣ ಕೊಯಮತ್ತೂರು ಕ್ಷೇತ್ರದಲ್ಲಿ 1500ಕ್ಕೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿಯ ವನತಿ ಶ್ರೀನಿವಾಸನ್ ಗೆಲುವಿನ ನಗೆ ಬೀರಿದ್ದಾರೆ.
ಮಕ್ಕಳ್ ನೀಧಿ ಮೈಯಮ್ (ಎಂಎನ್ಎಂ) ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಹಾಗೂ ಕಾಂಗ್ರೆಸ್ನ ಮಯೂರ ಜಯಕುಮಾರ್ ವಿರುದ್ಧ ವನತಿ ಶ್ರೀನಿವಾಸನ್ ರೋಚಕ ಗೆಲುವು ದಾಖಲಿಸಿದ್ದಾರೆ. ಆರಂಭದಲ್ಲಿ ನಟ ಕಮಲ್ ಹಾಸನ್ ಮುನ್ನಡೆ ಸಾಧಿಸಿದ್ದರು. ಕೆಲವು ಸುತ್ತುಗಳ ನಂತರ ಮಯೂರ ಜಯಕುಮಾರ್ ಮುನ್ನಡೆಯಲ್ಲಿದ್ದರು. ಆರಂಭದಲ್ಲೇ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ವನತಿ ಅಂತಿಮ ಸುತ್ತಿನ ವೇಳೆಗೆ ವಿಜೇತರಾಗಿ ಹೊರಹೊಮ್ಮಿದ್ದರು.
ಡಿಲಿಮಿಟೇಶನ್ ಬಳಿಕ 2008ರಲ್ಲಿ ದಕ್ಷಿಣ ಕೊಯಮತ್ತೂರು ಕ್ಷೇತ್ರವನ್ನು ರಚಿಸಲಾಯಿತು. 2011ರಲ್ಲಿ ಎಐಎಡಿಎಂಕೆಯ ದೊರೈಸ್ವಾಮಿ ಇಲ್ಲಿನ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು. 2016ರಲ್ಲಿ ಎಐಎಡಿಎಂಕೆಯ ಅಮ್ಮನ್ ಕೆ.ಅರ್ಜುನನ್ ವಿಧಾನಸಭೆಗೆ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಕೊರೊನಾ ನಿಯಮ ಧಿಕ್ಕರಿಸಿ ಡಿಎಂಕೆ ಕಾರ್ಯಕರ್ತರ ಕುಣಿತ, ಪಟಾಕಿ ಸಿಡಿಸಿ ಸಂಭ್ರಮ... ವಿಡಿಯೋ
ಸುಮಾರು 1.75 ಲಕ್ಷ ಮತದಾರರಿರುವ ಈ ಕ್ಷೇತ್ರದಿಂದ 2021ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಘೋಷಿಸಿದ ನಂತರ ಕ್ಷೇತ್ರವು ಹೆಚ್ಚಿನ ಗಮನ ಸೆಳೆಯಿತು. ಬಿಜೆಪಿಯ ರಾಷ್ಟ್ರೀಯ ಮಹಿಳಾ ವಿಂಗ್ ಅಧ್ಯಕ್ಷೆ ವನತಿ ಶ್ರೀನಿವಾಸನ್ ಮತ್ತು ತಮಿಳುನಾಡಿನ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಮಯೂರ ಜಯಕುಮಾರ್ ಕೂಡ ಇಲ್ಲಿಂದ ಕಣಕ್ಕಿಳಿಯುತ್ತಿದ್ದಂತೆ ಮೂವರು ಖ್ಯಾತ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ಕೊಯಮತ್ತೂರು ನನ್ನ ಹೃದಯಕ್ಕೆ ಹತ್ತಿರವಾದ ಸ್ಥಳವಾಗಿದೆ. ಭ್ರಷ್ಟ ರಾಜಧಾನಿಯಾಗಿ ಮಾರ್ಪಟ್ಟಿರುವ ಪ್ರದೇಶವನ್ನು ಬದಲಾಯಿಸುತ್ತೇನೆ ಎಂದಿದ್ದ ಕಮಲ್ ಹಾಸನ್ ಇದೀಗ ಸೋಲುಂಡಿದ್ದಾರೆ.