ವಾಷಿಂಗ್ಟನ್ (ಅಮೆರಿಕ) : 2008ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹವ್ವುರ್ ರಾಣಾ ಎಂಬಾತನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್‌ಎ ನ್ಯಾಯಾಲಯ ಒಪ್ಪಿದೆ. ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅಮೆರಿಕ ಆತನನ್ನು ಬಂಧಿಸಿತ್ತು.
ತಹವ್ವುರ್ ರಾಣಾ 2008ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ. ಅತ್ಯಂತ ಕ್ರೂರವಾಗಿ ದಾಳಿ ಮಾಡಿದ್ದ 10 ಮಂದಿ ಪಾಕಿಸ್ತಾನಿ ಭಯೋತ್ಪಾದಕರು, ಆರು ಮಂದಿ ಅಮೆರಿಕನ್ನರು ಸೇರಿ ಸುಮಾರು 160 ಮಂದಿಯನ್ನು ದಾರುಣವಾಗಿ ಹತ್ಯೆ ಮಾಡಿದ್ದರು.
ಭಾರತ ಸಲ್ಲಿಸಿರುವ ಮನವಿ ಪುರಸ್ಕರಿಸಿರುವ ಯುಎಸ್ ಕೋರ್ಟ್ ಎಲ್ಲ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಆರೋಪಿಯ ವಿರುದ್ಧ ಪ್ರಸ್ತುತಪಡಿಸಿರುವ ವಾದಗಳನ್ನು ಪರಿಗಣಿಸಲಾಗಿದೆ ಎಂದು ನ್ಯಾಯಾಧೀಶ ಜಾಕ್ವೆಲಿನ್ ಚೂಲ್ಜಿಯಾನ್ ಹೇಳಿದರು. 48 ಪುಟಗಳ ಆದೇಶವನ್ನು ಅವರು ಪ್ರಕಟಿಸಿದರು.
ರಾಣಾ ಮತ್ತು ಆತನ ಗೆಳೆಯ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಮತ್ತು ಇತರರು ಮುಂಬೈ ಭಯೋತ್ಪಾದಕ ದಾಳಿಯ ಷಡ್ಯಂತ್ರ ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಭಾರತ ಸರ್ಕಾರ ಆರೋಪಿಸಿದೆ. ರಾಣಾ ವಿರುದ್ಧ ಯುದ್ಧ ಪಿತೂರಿ, ಕೊಲೆ, ಭಯೋತ್ಪಾದನಾ ಕೃತ್ಯ ಮುಂತಾದ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.
2011 ರಲ್ಲಿ ಪಾಕಿಸ್ತಾನದ ಉಗ್ರ ಸಂಘಟನೆ ಲಷ್ಕರ್-ಎ-ತೋಯ್ಬಾಗೆ ಬೆಂಬಲ ನೀಡಿ ಮುಂಬೈ ದಾಳಿಗೆ ಕಾರಣನಾದ ರಾಣಾನನ್ನು ದೋಷಿ ಎಂದು ಯುಎಸ್ ನ್ಯಾಯಾಲಯ ಘೋಷಿಸಿತ್ತು. ಇನ್ನೊಂದೆಡೆ, ಹಸ್ತಾಂತರದ ಮನವಿಯನ್ನು ರಾಣಾ ಪರ ವಕೀಲರು ವಿರೋಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಭಾರತ- ಯುಎಸ್ ಆರೋಪಿಯ ಹಸ್ತಾಂತರ ಒಪ್ಪಂದ ಮಾಡಿಕೊಂಡಿವೆ. ರಾಣಾ ಹಸ್ತಾಂತರವು ಈ ಒಪ್ಪಂದದ ವ್ಯಾಪ್ತಿಯ ಅಡಿಯಲ್ಲಿಯೇ ನಡೆಯುತ್ತದೆ ಎಂದು ತಿಳಿಸಿದ್ದಾರೆ.
2008 ರ ನವೆಂಬರ್ 26ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಆಗಮಿಸಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಭಯೋತ್ಪಾದಕರು ಸಂಘಟಿತ ಗುಂಡಿನ ದಾಳಿ ನಡೆಸಿದ್ದರು. 300ಕ್ಕೂ ಹೆಚ್ಚು ಮಂದಿ ಗಾಯಗೊಂಡು 166ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.
ಛತ್ರಪತಿ ಶಿವಾಜಿ ಟರ್ಮಿನಸ್ (ಸಿಎಸ್‌ಟಿ) ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಟವರ್ ಮತ್ತು ಒಬೆರಾಯ್-ಟ್ರೈಡೆಂಟ್ ಹೋಟೆಲ್‌ಗಳಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.
ಇದನ್ನೂ ಓದಿ : ನನ್ನನ್ನು ಬಂಧಿಸಲು ಪೊಲೀಸರು ಮನೆ ಸುತ್ತುವರಿದಿದ್ದಾರೆ: ಇಮ್ರಾನ್ ಖಾನ್