ನವದೆಹಲಿ: ಕೊರೊನಾ ಎರಡನೇ ಅಲೆಯನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಗೃಹ ವ್ಯವಹಾರಗಳ ಸಂಸದೀಯ ಸಮಿತಿಯ ಸಭೆಯಲ್ಲಿ ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿದ್ದು, ಭಾರಿ ಗದ್ದಲ ಸೃಷ್ಟಿಯಾಯಿತು.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿದಂತೆ ಪ್ರತಿಪಕ್ಷ ಪಕ್ಷಗಳ ಅನೇಕ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದು, ಕೊರೊನಾ ಮೂರನೇ ಅಲೆಯನ್ನು ಯಶಸ್ವಿಯಾಗಿ ತಡೆಯಲು ಪ್ರತ್ಯೇಕ ಒಕ್ಕೂಟವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಾರೆ.
ಸಂಸದೀಯ ಸಮಿತಿ ಸಭೆಯಲ್ಲಿ ಹಾಜರಿದ್ದ ಸರ್ಕಾರಿ ಅಧಿಕಾರಿಗಳು ಮೂರನೇ ಅಲೆ ಯಾವಾಗ ಬರುತ್ತದೆ ಎಂದು ಹೇಳಲಿಲ್ಲ. ಬೇರೆ ಬೇರೆ ತಜ್ಞರಿಂದ ವಿಭಿನ್ನ ಅಭಿಪ್ರಾಯಗಳು ಬರುತ್ತಿವೆ. ಆದ್ದರಿಂದ ವಿಜ್ಞಾನಿಗಳು ಮತ್ತು ನುರಿತ ತಜ್ಞರನ್ನು ಒಳಗೊಂಡ ಒಕ್ಕೂಟ ಇರಬೇಕು ಎಂದು ನಾವು ಒತ್ತಾಯಿಸಿದ್ದೇವೆ ಎಂದು ಸಂಸದೀಯ ಸಮಿತಿಯ ಸದಸ್ಯರೊಬ್ಬರು ಈಟಿವಿ ಭಾರತ್‌ಗೆ ಸ್ಪಷ್ಟನೆ ನೀಡಿದ್ದಾರೆ.
ಸಭೆಯಲ್ಲಿ ಗೃಹ, ಆರೋಗ್ಯ, ಆರ್ಥಿಕ ವ್ಯವಹಾರಗಳ ಜೊತೆಗೆ ಕೈಗಾರಿಕೆ ಮತ್ತು ಕಾರ್ಮಿಕ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಎದ್ದಿರುವ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಎರಡನೇ ಅಲೆಯಿಂದ ಆದ ಹಾನಿಗೆ ಯಾರು ಹೊಣೆ ಎಂದು ಸಂಸದರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿಕ್ಕಿಲ್ಲ ರೇಟು..ಕೊತ್ತಂಬರಿ ಉಚಿತವಾಗಿ ಹಂಚಿದ ಪಾಲಿಕೆ ಸದಸ್ಯ..!
ಮಾರುಕಟ್ಟೆಯಲ್ಲಿ ಹಣದ ಲಭ್ಯತೆಯಿರಬೇಕು. ನಿರುದ್ಯೋಗ ದೊಡ್ಡ ಮಟ್ಟದಲ್ಲಿದೆ. ಸರಕುಗಳ ಬೆಲೆ ಹೆಚ್ಚುತ್ತಿದೆ. ಸಮಿತಿಯ ಅಧ್ಯಕ್ಷ ಆನಂದ್ ಶರ್ಮಾ ಅವರು ಹಣಕಾಸಿನ ಕೊರತೆಯನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದಾರೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.