ಲಖನೌ (ಉತ್ತರ ಪ್ರದೇಶ): ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ರಚಿಸಿಕೊಂಡಿರುವ I.N.D.I.A ಕೂಟದಲ್ಲಿ ಗೆಲುವಿಗೂ ಮೊದಲೇ 'ಪ್ರಧಾನಿ ಹುದ್ದೆ'ಗಾಗಿ ತಾಕಲಾಟ ಶುರುವಾಗಿದೆ. ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ಅಭ್ಯರ್ಥಿಗಳು ಎಂದು ಬಿಂಬಿಸುತ್ತಿದ್ದರೆ, ಅತ್ತ ನಿತೀಶ್ಕುಮಾರ್, ಮಮತಾ ಬ್ಯಾನರ್ಜಿ ರೇಸ್ನಲ್ಲಿದ್ದಾರೆ. ಇದೆಲ್ಲದರ ಮಧ್ಯೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ 'ಮುಂದಿನ ಪ್ರಧಾನಿ' ಎಂಬ ಪೋಸ್ಟರ್ಗಳು ಹರಿದಾಡುತ್ತಿವೆ.
ಅಖಿಲೇಶ್ ಯಾದವ್ ಅವರ ಜನ್ಮದಿನ ಜುಲೈ 1 ಆಗಿದ್ದರೂ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಅವರ ಬರ್ತ್‌ಡೇಯನ್ನು ಆಗಾಗ್ಗೆ ಆಚರಿಸಲಾಗುತ್ತಿದೆ. ಇದೇ ರೀತಿ ಸೋಮವಾರವೂ ಜನ್ಮದಿನದ ಶುಭ ಕೋರಲಾಗಿದ್ದು, ಲಖನೌದಲ್ಲಿರುವ ಪಕ್ಷದ ಕಚೇರಿಯ ಹೊರಗೆ ಅವರ ಬೆಂಬಲಿಗರು ಬ್ಯಾನರ್ ಅಳವಡಿಸಿದ್ದು, ಅದರಲ್ಲಿ 'ಭವಿಷ್ಯದ ಪ್ರಧಾನಿ ಅಖಿಲೇಶ್ ಯಾದವ್' ಎಂದು ಬರೆಯಲಾಗಿದೆ. ಇದು ಎಸ್‌ಪಿ ಕೂಡ ಪಿಎಂ ಹುದ್ದೆಯ ಆಕಾಂಕ್ಷಿ ಎಂಬುದನ್ನು ತೋರ್ಪಡಿಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಪಕ್ಷದ ವಕ್ತಾರ ಫಕ್ರುಲ್ ಹಸನ್ ಚಾಂದ್, ಪಕ್ಷದ ಕಾರ್ಯಕರ್ತರು ತಮ್ಮ ನಾಯಕನ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸಲು ಅವರ ಜನ್ಮದಿನಕ್ಕೆ ಶುಭ ಕೋರಲು ಬ್ಯಾನರ್ಗಳನ್ನು ಹಾಕಲಾಗಿದೆ. ಅದರಲ್ಲಿ ಕೆಲವು ಮುಖಂಡರು ಮತ್ತು ಕಾರ್ಯಕರ್ತರ ಪ್ರೀತಿಯಿಂದ ಈ ರೀತಿಯಾಗಿ ಬರೆಸಿದ್ದಾರೆ. ಅಖಿಲೇಶ್ ಯಾದವ್ ಅವರು ದೇಶದ ಪ್ರಧಾನಿಯಾಗಲಿ ಮತ್ತು ಜನರ ಸೇವೆ ಮಾಡಲಿ ಎಂಬುದು ಪಕ್ಷದ ಕಾರ್ಯಕರ್ತರ ಆಶಯವಾಗಿದೆ ಎಂದರು.
'ಇದು ಹಗಲುಗನಸು'- ಬಿಜೆಪಿ ಲೇವಡಿ: ಮುಂದಿನ ಪ್ರಧಾನಿ ಪೋಸ್ಟರ್‌ಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, 'ಹಗಲು ಕನಸು ಕಾಣುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ' ಎಂದು ಲೇವಡಿ ಮಾಡಿದೆ. ಈ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ನಾಯಕ ಮತ್ತು ಯುಪಿ ಸರ್ಕಾರದ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ, 'ಮುಂಗೇರಿ ಲಾಲ್ ಕೆ ಹಸೀನ್ ಸಪ್ನೆ' ಎಂಬ ಮಾತಿದೆ. ಅಂದರೆ, ಹಗಲುಗನಸು ಕಾಣುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಇಲ್ಲಿ ಸಾಮರ್ಥ್ಯಕ್ಕೆ ತಕ್ಕಂತೆ ಕನಸು ಕಾಣಬೇಕು ಅಷ್ಟೇ ಎಂದಿದ್ದಾರೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮೋದಿ ಅವರ ಮೇಲೆ ದೇಶ ನಂಬಿಕೆ ಇಟ್ಟಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದು ಡ್ಯಾನಿಶ್ ಅನ್ಸಾರಿ ಹೇಳಿದರು.
ಇಂಡಿಯಾ ಕೂಟದಲ್ಲಿ ಬಿರುಕು: ಇದೇ ವೇಳೆ ಮಧ್ಯಪ್ರದೇಶ ಚುನಾವಣೆಯಲ್ಲಿ ಸೀಟು ಹಂಚಿಕೆಯ ಬಗ್ಗೆ ಸಮಾಜವಾದಿ ಮತ್ತು ಕಾಂಗ್ರೆಸ್ ಮಧ್ಯೆ ತಾಳಮೇಳ ಕುದುರಿಲ್ಲ. ಹೀಗಾಗಿ ಮುನಿಸಿಕೊಂಡಿರುವ ಎಸ್‌ಪಿ ನಾಯಕರು, ಕಾಂಗ್ರೆಸ್ ನಮಗೆ ದ್ರೋಹ ಮಾಡುತ್ತಿದೆ. ದೇಶದಲ್ಲಿ ಒಂದಾಗಿರುವ ಎಲ್ಲ ವಿಪಕ್ಷಗಳು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿವೆ. ಸೀಟು ಹಂಚಿಕೆಯಲ್ಲಿ ಮೋಸವಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ರೈ ಅವರ ಮೇಲೆ ಎಸ್‌ಪಿ ನಾಯಕರು ಕಿಡಿಕಾರಿದ್ದಾರೆ.
ಇದರ ಜೊತೆಗೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಎಸ್‌ಪಿ ನೇರವಾಗಿ ಹೋರಾಡಲಿದೆ ಎಂದು ಅಖಿಲೇಶ್ ಯಾದವ್ ಹೇಳಿಕೆ ನೀಡಿದ್ದು, ಇಂಡಿಯಾ ಕೂಟದಿಂದ ಅವರು ಹೊರ ಬರಲಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ.
ಅಖಿಲೇಶ್ ಯಾದವ್ ಪ್ರತಿಕ್ರಿಯೆ: ಭವಿಷ್ಯದ ಪ್ರಧಾನಿ ಪೋಸ್ಟರ್ಗಳ ಬಗ್ಗೆ ಡೆಹ್ರಾಡೂನ್ನಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಅಖಿಲೇಶ್ ಯಾದವ್, ಇದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಅವರು ಪ್ರೀತಿಯಿಂದ ಹೇಳಿದ್ದಾರೆ. ಕೇವಲ ಪೋಸ್ಟರ್‌ಗಳನ್ನು ಹಾಕುವ ಮೂಲಕ ಯಾರೂ ಪ್ರಧಾನಿಯಾಗುವುದಿಲ್ಲ. ಬಿಜೆಪಿಯನ್ನು ಸೋಲಿಸುವುದು ಸಮಾಜವಾದಿಗಳ ಗುರಿ ಎಂದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ: ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ- ಸಲೀಂ ಅಹ್ಮದ್