ಅಲಿಗಢ (ಯುಪಿ): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಕಿರುಕುಳ ಕಾಯ್ದೆ ಅಡಿ ತಮ್ಮ ವಿರುದ್ಧ ಹತ್ತಕ್ಕೂ ಹೆಚ್ಚು ಸುಳ್ಳು ಪ್ರಕರಣಗಳು ದಾಖಲಾಗಿವೆ ಎಂದು ಉತ್ತರ ಪ್ರದೇಶದ ಅಲಿಘರ್ ಜಿಲ್ಲೆಯ ಕುಟುಂಬವೊಂದು ಆರೋಪಿಸಿದೆ. ಸುಳ್ಳು ಪ್ರಕರಣಗಳಿಂದ ನೊಂದಿರುವ ತಮಗೆ ದಯಾಮರಣ ನೀಡಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕುಟುಂಬ ಮನವಿ ಮಾಡಿದೆ. ಮುಖ್ಯಮಂತ್ರಿಗಳು ಈ ದಿನ ಅಲಿಗಢಕ್ಕೆ ಭೇಟಿ ನೀಡಲಿದ್ದಾರೆ.
ಕೊತ್ವಾಲಿ ಇಗ್ಲಾಸ್ ಪ್ರದೇಶದ ಹಸ್ತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮುನ್ನಿದೇವಿ ಕುಟುಂಬದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಮಸ್ಯೆ ಬಗೆಹರಿಸಲು ಈ ಹಿಂದೆ ಗ್ರಾಮದಲ್ಲಿ ಮಹಾಪಂಚಾಯತ್ ನಡೆಸಲಾಗಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಆದರೆ, ಪೊಲೀಸರು ಮಧ್ಯಪ್ರವೇಶಿಸಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಮಹಾಪಂಚಾಯತ್ ಸಭೆಯನ್ನು ವಿಸರ್ಜಿಸಿದರು. ಮಹಾಪಂಚಾಯತ್ ಆಯೋಜಿಸಿದ್ದವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಹಾಪಂಚಾಯತ್‌ನಿಂದಲೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಿಂದ ದಯಾಮರಣ ಪಡೆಯಲು ನಿರ್ಧರಿಸಿದ್ದು, ದಯಾಮರಣ ನೀಡುವಂತೆ ಒತ್ತಾಯಿಸಿ ಮನೆ ಮುಂದೆ ಭಿತ್ತಿಪತ್ರಗಳನ್ನು ಅಂಟಿಸಿರುವುದಾಗಿ ತಿಳಿಸಿದರು. ತಮ್ಮ ಆಸ್ತಿಯನ್ನು ಸರಕಾರ ಜಪ್ತಿ ಮಾಡಬೇಕು ಮತ್ತು ಸರಕಾರ ತಮ್ಮನ್ನು ಗಲ್ಲಿಗೇರಿಸಿ ನ್ಯಾಯ ಕೊಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕಟ್ಟುನಿಟ್ಟಿನ ಸೆಕ್ಷನ್‌ಗಳ ಅಡಿ ಈ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗವೆ ಎಂದು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಪಲಾಶ್ ಬನ್ಸಾಲ್ ಹೇಳಿದ್ದಾರೆ. ಅಲ್ಲದೇ ಈ ಕುಟುಂಬದವರು ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ವಿಷಯದ ಬಗ್ಗೆ ಪರಿಶೀಲನೆ ನಡೆಸಿದ್ದು, ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: 11 ಮಕ್ಕಳಿದ್ದರೂ ತುತ್ತು ಅನ್ನಕ್ಕೆ ವೃದ್ಧೆ ಪರದಾಟ.. ದಯಾಮರಣ ಕೋರಿ ಹಾವೇರಿ ಜಿಲ್ಲಾಧಿಕಾರಿಗೆ ಅರ್ಜಿ