ಲಖನೌ, ಉತ್ತರ ಪ್ರದೇಶ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಇಳಿಮುಖವಾಗುತ್ತಿದ್ದು, ಈಗಾಗಲೇ ರಾಜ್ಯದಲ್ಲಿ ವಿಧಿಸಲಾಗಿರುವ ಭಾಗಶಃ ಕೊರೊನಾ ವೈರಸ್ ಕರ್ಫ್ಯೂ ಅನ್ನು ಮೇ 31ರಂದು ಬೆಳಗ್ಗೆ 7 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರ ಪ್ರದೇಶದ ಸರ್ಕಾರವು ರಾಜ್ಯದ ಜನರ ಜೀವ ಕಾಪಾಡಲು ಬದ್ಧವಾಗಿದೆ. ಇದರಿಂದಾಗಿ ನಾವು ಕೊರೊನಾ ಕರ್ಫ್ಯೂ ಅನ್ನು ಅಳವಡಿಸಿಕೊಂಡಿದ್ದೇವೆ. ಕೊರೊನಾ ಕರ್ಫ್ಯೂ ಸಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಕೊರೊನಾ ಸರಪಳಿ ಮುರಿಯಲು ಸಹಕಾರಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ ಜನರಿಂದಲೂ ಕೊರೊನಾ ಕರ್ಫ್ಯೂಗೆ ಸಾಕಷ್ಟು ಬೆಂಬಲವಿದೆ. ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿವೆ. ವ್ಯಾಕ್ಸಿನೇಷನ್, ಕೈಗಾರಿಕಾ ಚಟುವಟಿಕೆಗಳು, ವೈದ್ಯಕೀಯ ಕಾರ್ಯಗಳು ಸೇರಿದಂತೆ ಮುಂತಾದ ಅಗತ್ಯ ಸೇವೆಗಳು ತಡೆರಹಿತವಾಗಿ ಮುಂದುವರಿಯುತ್ತದೆ ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ನಾನು ವೈಮಾನಿಕ ಸಮೀಕ್ಷೆ ನಡೆಸಿಲ್ಲ, ಸ್ಥಳಕ್ಕೆ ಭೇಟಿ ನೀಡಿದ್ದೇನೆ : ಬಿಜೆಪಿಗೆ ತಿರುಗೇಟು ನೀಡಿದ ಉದ್ಧವ್ ಠಾಕ್ರೆ
ಇದಕ್ಕೂ ಮೊದಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇ 15ರಂದು ನಡೆದ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ, ಕೊರೊನಾ ಕರ್ಫ್ಯೂ ವಿಸ್ತರಣೆ ಸೇರಿದಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
ಇನ್ನು ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ ಹೊಸ 6,046 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 226 ಸಾವುಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.