ಉನ್ನಾವೊ (ಉತ್ತರ ಪ್ರದೇಶ): ವೇಗವಾಗಿ ಸಂಚರಿಸುತ್ತಿದ್ದ ಟ್ರಕ್‌ವೊಂದು ರಸ್ತೆ ದಾಟುತ್ತಿದ್ದ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಒಟ್ಟು 6 ಮಂದಿ ದಾರುಣವಾಗಿ ಸಾವಿಗೀಡಾದ ಘಟನೆ ಉನ್ನಾವೊ ಜಿಲ್ಲೆಯ ಲಕ್ನೋ-ಕಾನ್ಪುರ ಹೆದ್ದಾರಿಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರನ್ನು ತಾಯಿ ಶಕುಂತಲಾ ಮತ್ತು ಮಗಳು ಶಿವಾನಿ ಎಂದು ಗುರುತಿಸಲಾಗಿದೆ. ಇವರು ಅಚಲಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾನ್ಪುರ-ಲಖನೌ ಹೆದ್ದಾರಿ ದಾಟುತ್ತಿದ್ದರು ಎಂದು ತಿಳಿದುಬಂದಿದೆ.
ಈ ಇಬ್ಬರು ಜಾಲಿಂಖೇಡಾ ಎಂಬ ಪ್ರದೇಶದ ತಮ್ಮ ಮನೆಗೆ ತೆರಳುತ್ತಿದ್ದರು. ರಸ್ತೆ ದಾಟುತ್ತಿದ್ದಾಗ ಲಕ್ನೋ ಕಡೆಯಿಂದ ವೇಗವಾಗಿ ಬಂದಪ್ಪಳಿಸಿದ ಟ್ರಕ್ ಇವರ ಮೈಮೇಲೆ ಹರಿದಿದ್ದಲ್ಲದೇ, ಪಕ್ಕದಲ್ಲಿ ನಿಂತಿದ್ದ ಸೈಕ್ಲಿಸ್ಟ್ ಛೋಟೆ ಲಾಲ್ ಎಂಬಾತನ ಪ್ರಾಣವನ್ನೂ ಬಲಿ ಪಡೆದಿದೆ. ಇಷ್ಟಾದ ನಂತರ, ವಾಹನ ನಿಯಂತ್ರಣ ಸಿಗದೇ ಅಲ್ಲೇ ಇದ್ದ ಮಾರುತಿ ಕಾರ್ಗೂ ಡಿಕ್ಕಿ ಹೊಡೆದು ಕಾರನ್ನು ಸ್ವಲ್ಪ ದೂರ ಎಳೆದೊಯ್ದಿದೆ. ಅಂತಿಮವಾಗಿ ಟ್ರಕ್ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ.
ತಕ್ಷಣವೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಕೂಡಲೇ ಎಸ್ಪಿ ಸಿದ್ಧಾರ್ಥ್ ಶಂಕರ್ ಮೀನಾ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಶಿ ಶೇಖರ್ ಸಿಂಗ್ ಸೇರಿದಂತೆ ಉಳಿದ ಪೊಲೀಸರು ಠಾಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಾಯಿ, ಮಗಳು ಹಾಗು ಸೈಕಲ್ ಸವಾರನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಕ್ರೇನ್ ಸಹಾಯದಿಂದ ಟ್ರಕ್ ಅನ್ನು ಹೊಂಡದಿಂದ ಮೇಲೆತ್ತಲಾಗಿದೆ.
ಟ್ರಕ್ನಲ್ಲಿ ಕಾರು ಸಿಲುಕಿಕೊಂಡಿತ್ತು. ಸತತ ಪರಿಶ್ರಮದ ನಂತರ ಅದರಲ್ಲಿದ್ದ ಮೂವರನ್ನು ಹೊರ ತೆಗೆದಿದ್ದಾರೆ. ಈ ಮೂವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತೀವ್ರ ಗಾಯಗಳಾಗಿದ್ದ ಕಾರಣ ಅವರೆಲ್ಲರೂ ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದ್ದಾರೆ. ಕಾರಿನಲ್ಲಿ ಮೃತಪಟ್ಟವರನ್ನು ವಿಮಲೇಶ್ ತಿವಾರಿ, ಅವರ ಪುತ್ರ ಶಿವಾಂಕ್ ಮತ್ತು ಅಳಿಯ ಪುರಣ್ ದೀಕ್ಷಿತ್ ಎಂದು ಗುರುತಿಸಲಾಗಿದೆ. ವಿಮಲೇಶ್ ತಿವಾರಿ ಅಚಲ್ಗಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಜೋವ ಗ್ರಾಮದ ನಿವಾಸಿಯಾಗಿದ್ದಾರೆ. ಕಾರಿನಲ್ಲಿದ್ದ ಅವರ ಅಳಿಯ ಅಜ್ಗೈನ್ ಪೊಲೀಸ್ ಠಾಣಾ ವ್ಯಾಪ್ತಿಯ ನವಾಬ್ ಗಂಜ್ ಪಟ್ಟಣದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದುರ್ಘಟನೆಯನ್ನು ಕಣ್ಣಾರೆ ಕಂಡ ಅಲ್ಲಿಯ ಜನರು ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿ, ಹೆದ್ದಾರಿ ತಡೆ ನಡೆಸಿದರು. ಇದರಿಂದ ರಸ್ತೆಯುದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸರು ಪರಿಸ್ಥಿತಿ ಸುಧಾರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ. ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ನೆಲ್ಲೂರಿನಲ್ಲಿ ರೈಲು ಡಿಕ್ಕಿಯಾಗಿ ಮೂವರು ಸಾವು