ನವದೆಹಲಿ: ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಪಕ್ಷದ ನಾಯಕರು ಸಂಸತ್ ಭವನದಿಂದ ವಿಜಯ್ ಚೌಕ್ವರೆಗೆ ಕಾಲ್ನಡಿಗೆಯಲ್ಲಿ ತೆರಳಿದರು.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, 'ಸಂಸತ್ತಿನಲ್ಲಿ ಮಾತನಾಡಲು ನಮಗೆ ಅವಕಾಶವಿಲ್ಲದ ಕಾರಣ ಇಂದು ನಾವು ನಿಮ್ಮೊಂದಿಗೆ (ಮಾಧ್ಯಮಗಳು) ಮಾತನಾಡಲು ಇಲ್ಲಿಗೆ ಬರಬೇಕಾಯಿತು. ಸಂಸತ್ತಿನ ಅಧಿವೇಶನ ಮುಗಿದಿದೆ, ದೇಶದ ಶೇ. 60 ಜನರು ಸಂಸತ್ ಅಧಿವೇಶನದಲ್ಲಿ ಇಲ್ಲದಿರುವುದು ಕಳವಳಕಾರಿಯಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ದೇಶದ ಶೇ.60 ರಷ್ಟು ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ, ಅವಮಾನಿಸಲಾಗಿದೆ. ನಿನ್ನೆ ರಾಜ್ಯಸಭೆಯಲ್ಲಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಶಿವಸೇನೆಯ ಸಂಜಯ್ ರಾವತ್ ಮಾತನಾಡಿ, ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಪ್ರತಿಪಕ್ಷಗಳಿಗೆ ಅವಕಾಶ ಸಿಗಲಿಲ್ಲ. ಮಹಿಳಾ ಸಂಸದರ ವಿರುದ್ಧ ನಿನ್ನೆ ನಡೆದ ಘಟನೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನಾವು ಪಾಕಿಸ್ತಾನದ ಗಡಿಯಲ್ಲಿ ನಿಂತಂತೆ ಭಾಸವಾಗುತ್ತಿದೆ ಎಂದರು.