ಅಗರ್ತಲಾ (ತ್ರಿಪುರ): ಇತ್ತೀಚೆಗಷ್ಟೇ ರಾಜ್ಯ ಪ್ರವಾಸ ಮಾಡಿ ಸಂಚಲನ ಉಂಟು ಮಾಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಲಿದೆ. ಅದರೊಂದಿಗೆ ಮಧ್ಯಪ್ರದೇಶ, ತ್ರಿಪುರಾ, ರಾಜಸ್ಥಾನ, ಛತ್ತೀಸ್ಗಢದಲ್ಲೂ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಕಳೆದ 2 ತಿಂಗಳಲ್ಲಿ ನಾನು ರಾಜ್ಯಕ್ಕೆ 5 ಬಾರಿ ಭೇಟಿ ನೀಡಿದ್ದೇನೆ. ರಾಜ್ಯದ ಜನರ ನಾಡಿಮಿಡಿತವನ್ನು ಗ್ರಹಿಸಿದ್ದೇನೆ. ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ಅಲ್ಲಿ ಕಂಡಿದ್ದೇನೆ. ಈ ಬಾರಿಯೂ ಬಿಜೆಪಿಗೆ ಭಾರಿ ಜನಾದೇಶ ಸಿಗುತ್ತದೆ ಎಂದು ಅಮಿತ್ ಶಾ ಹೇಳಿದರು.
ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಿದೆ. ಮಂಡ್ಯದಲ್ಲಿ ನಾನು ಯಶಸ್ವಿಯಾಗಿ ಜಾಥಾ ಮಾಡಿದ್ದೇನೆ. ಆ ಭಾಗದಲ್ಲಿ ನೆಲೆಯೂರಿರುವ ಕುಟುಂಬದ ಪಕ್ಷಕ್ಕೆ ಈ ಬಾರಿ ಜನರು ದೂರ ಸರಿಸಲಿದ್ದಾರೆ. ಬಿಜೆಪಿಯ ಅಭಿವೃದ್ಧಿಯನ್ನು ಅಲ್ಲಿನ ಜನರೂ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಮುಂದುವರಿಸಲಿದೆ ಎಂದು ಹೇಳಿದರು.
ಹಿಂಡೆನ್‌ಬರ್ಗ್- ಅದಾನಿ ವಿವಾದದಲ್ಲಿ ಪ್ರತಿಪಕ್ಷಗಳು ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿವೆ. ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇರುವ ಕಾರಣ ನಾನು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಪ್ರಕರಣದಲ್ಲಿ ಮರೆಮಾಚಲು ಮತ್ತು ಭಯಪಡುವ ವಿಷಯ ಏನೂ ಇಲ್ಲ ಎಂದು ಹೇಳಿದರು.
ರಾಜಕೀಯಕ್ಕಾಗಿ ಅದಾನಿ ವಿವಾದ: ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಮಾಡಲು ಹಿಂಡೆನ್‌ಬರ್ಗ್- ಅದಾನಿ ಪ್ರಕರಣವನ್ನು ಎತ್ತುತ್ತಿವೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿದರು. ಈ ವಿಚಾರವಾಗಿ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಗುರಿಯಾಗಿಸಿಕೊಂಡಿವೆ ಎಂದು ಟೀಕಿಸಿದರು.
ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯಿಂದಾಗಿ ಸಂಭವಿಸಿದ ಪರಿಸ್ಥಿತಿಯನ್ನು ಎದುರಿಸಲು ಸೆಬಿ ಸಂಪೂರ್ಣವಾಗಿ ಸಜ್ಜಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠಕ್ಕೆ ತಿಳಿಸಿದರು. ಭವಿಷ್ಯದಲ್ಲಿ ಹೂಡಿಕೆದಾರರನ್ನು ರಕ್ಷಿಸಲು ಸಮಿತಿ ರಚನೆಗೆ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ. ಸಮಿತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುವುದರಿಂದ ಸಮಿತಿ ಸದಸ್ಯರ ಹೆಸರನ್ನು ಮುಚ್ಚಿದ ಕವರ್‌ನಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಪಿಎಫ್‌ಐ ವಿರುದ್ಧ ಶಾ ಕಿಡಿ: ಅತ್ಯುಗ್ರ ಧಾರ್ಮಿಕ ಭಾವನೆ ಮತ್ತು ಭಯೋತ್ಪಾದನೆ ಚಟುವಟಿಕೆ ನಡೆಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸರ್ಕಾರ ನಿಷೇಧಿಸಿರುವುದನ್ನು ಗೃಹ ಸಚಿವ ಅಮಿತ್ ಶಾ ಅವರು ಶ್ಲಾಘಿಸಿದರು. ಮತಾಂಧತೆ ಮತ್ತು ಭಯೋತ್ಪಾದನೆಯನ್ನು ವಿಸ್ತರಿಸುವುದು ರಾಷ್ಟ್ರೀಯ ಹಿತಾಸಕ್ತಿಗೆ ತೊಂದರೆ ಎಂದು ಅಮಿತ್ ಶಾ ಹೇಳಿದರು.
ಪಿಎಫ್‌ಐ ಮತ್ತು ಕಾಂಗ್ರೆಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಂಗ್ರೆಸ್ ಮತ್ತು ಪಿಎಫ್‌ಐ ಒಂದೇ ಎಂದು ನಾನು ಹೇಳಿಲ್ಲ. 'ಪಿಎಫ್‌ಐ ಕಾರ್ಯಕರ್ತರ ಮೇಲೆ ನಾನಾ ರೀತಿಯ ಕೇಸ್‌ಗಳಿವೆ. ಕಾಂಗ್ರೆಸ್ ಸರ್ಕಾರ ಪ್ರಕರಣಗಳನ್ನು ಮುಚ್ಚಿ ಹಾಕಲು ಯತ್ನಿಸಿತು. ಆದರೆ, ನ್ಯಾಯಾಲಯ ಅದನ್ನು ತಡೆಯಿತು. ವೋಟ್ ಬ್ಯಾಂಕ್ ರಾಜಕಾರಣದ ಹೊರತಾಗಿ ರಾಷ್ಟ್ರದ ಹಿತಾಸಕ್ತಿಯಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಓದಿ: ತುಮಕೂರು ಜಿಲ್ಲೆಯಲ್ಲಿ ಹುಲಿ ಮೃತದೇಹ ಪತ್ತೆ: ಸಾವಿನ ಸುತ್ತ ಅನುಮಾನಗಳ ಹುತ್ತ