ನವದೆಹಲಿ: ಉಕ್ರೇನ್ ಮೇಲೆ ಇಂದು ಬೆಳಗ್ಗೆ ದಿಢೀರ್ ರಷ್ಯಾ ಸೇನಾ ಕಾರ್ಯಾಚರಣೆ ನಡೆಸಿ ಪ್ರಮುಖ ನಗರಗಳ ಮೇಲೆ ದಾಳಿ ನಡೆಸಿದ್ದು, ಭಾರತಕ್ಕೆ ಎರಡೂ ಕಡೆ ಸಂಬಂಧ ಗಟ್ಟಿಗೊಳಿಸುವ ದೊಡ್ಡ ಅವಕಾಶ ಒದಗಿ ಬಂದಿದೆ. ಈಗಾಗಲೇ ಉಕ್ರೇನ್- ರಷ್ಯಾ ಯುದ್ಧದ ವಿಚಾರದಲ್ಲಿ ಭಾರತದ ತಟಸ್ಥ ನಿಲುವನ್ನು ರಷ್ಯಾ ಸ್ವಾಗತಿಸಿದೆ. ಭಾರತವು ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ.
ಜಾಗತಿಕ ವ್ಯವಹಾರಗಳಿಗೆ ಸ್ವತಂತ್ರ ಮತ್ತು ಸಮತೋಲಿತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನವದೆಹಲಿಯಲ್ಲಿನ ರಷ್ಯಾದ ರಾಯಭಾರ ಕಚೇರಿಯ ರೋಮನ್ ಬಾಬುಶ್ಕಿನ್ ಹೇಳಿದ್ದಾರೆ. ಇತ್ತ ಭಾರತಕ್ಕೆ ಉಕ್ರೇನ್ ರಾಯಭಾರಿಯಾಗಿರುವ ಡಾ. ಇಗೊರ್ ಪೊಲಿಖಾ ಅವರು ರಷ್ಯಾ ಮತ್ತು ಉಕ್ರೇನ್ ಬಿಕ್ಕಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಗೆ ಒತ್ತಾಯಿಸಿದ್ದಾರೆ. ಭಾರತವು ರಷ್ಯಾದೊಂದಿಗೆ ವಿಶೇಷ ಸಂಬಂಧ ಹೊಂದಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ದೆಹಲಿ ಹೆಚ್ಚು ಸಕ್ರಿಯ ಪಾತ್ರ ವಹಿಸುತ್ತದೆ.
ಮೋದಿ ಜೀ ವಿಶ್ವದ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರು. ನಿಮಗೆ ವಿಶೇಷ ಸವಲತ್ತು ಮತ್ತು ರಷ್ಯಾದೊಂದಿಗೆ ಕಾರ್ಯತಂತ್ರದ ಸಂಬಂಧವಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವು ಭಾರತ ಸರ್ಕಾರದಿಂದ ಹೆಚ್ಚು ಅನುಕೂಲಕರವಾದ ಮನೋಭಾವ ನಿರೀಕ್ಷಿಸುತ್ತಿದ್ದೇವೆ ಎಂದು ಇಗೊರ್ ಪೊಲಿಖಾ ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಭಾರತದ ತಟಸ್ಥ ನಿಲುವು ಸ್ವಾಗತಾರ್ಹ: ರಷ್ಯಾ
ಭಾರತದ ನಿಲುವನ್ನು ರಷ್ಯಾ ಶ್ಲಾಘಿಸುವುದು ಮತ್ತು ಭಾರತದ ಮಧ್ಯಸ್ಥಿಕೆಯನ್ನು ಕೋರಿ ನವದೆಹಲಿಯಲ್ಲಿರುವ ಉಕ್ರೇನ್ ರಾಯಭಾರಿ ಕೇಳುವುದು - ಇದು ಭಾರತವು ಎರಡೂ ಕಡೆಗಳೊಂದಿಗೆ ಹೊಂದಿರುವ ಬಾಂಧವ್ಯವನ್ನು ಒತ್ತಿ ಹೇಳುತ್ತದೆ. ದೆಹಲಿಯಲ್ಲಿಂದು ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಕೆಲ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಭಾರತ ಸಭೆ ನಡೆಸಿದ್ದು, ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಮೋದಿ ಕರೆ ಮಾಡುವ ನಿರೀಕ್ಷೆ ಇದೆ.
ಭಾರತಕ್ಕೆ ಖಾದ್ಯ ತೈಲದ ಪ್ರಮುಖ ಪೂರೈಕೆದಾರರಲ್ಲದೆ, ಉಕ್ರೇನ್ ದೇಶವು ಅನೇಕ ಭಾರತೀಯ ಮಿಲಿಟರಿ ಉಪಕರಣಗಳು ಮತ್ತು ಬಿಡಿಭಾಗಗಳ ಸಮರ್ಪಿತ ಪೂರೈಕೆದಾರವಾಗಿದೆ - ಇದು ಸೋವಿಯತ್ ಯುಗದ ಭಾರತದೊಂದಿಗೆ ಸಂಬಂಧದ ಪರಂಪರೆಯಾಗಿದೆ. ಮತ್ತೊಂದೆಡೆ, ರಷ್ಯಾ ಕಳೆದ ಎಂಟು ದಶಕಗಳಿಂದ ಭಾರತದ ಸ್ನೇಹಿತ. ಉಭಯ ರಾಷ್ಟ್ರಗಳ ನಡುವಿನ ಆಳವಾದ ಸಹಕಾರವನ್ನು ಡಿಸೆಂಬರ್ 2021ರಲ್ಲಿ ಒಪ್ಪಂದದ ಮೂಲಕ 2031ಕ್ಕೆ ವಿಸ್ತರಿಸಲಾಗಿದೆ. ಸುಮಾರು 60 ಪ್ರತಿಶತದಷ್ಟು ಭಾರತೀಯ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ವ್ಯವಸ್ಥೆಗಳು ಈಗಾಗಲೇ ರಷ್ಯಾದ ಮೂಲದ್ದಾಗಿವೆ.
ಉಕ್ರೇನ್ಗೆ ಬೆಂಬಲ ನೀಡಿದರೆ ರಷ್ಯಾದ ಕೆಂಗಣ್ಣಿಗೆ ಭಾರತ ಗುರಿಯಾಗುತ್ತದೆ. ರಷ್ಯಾವನ್ನು ಬೆಂಬಲಿಸಿದರೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳ ಸಂಬಂಧದಲ್ಲಿ ಬಿರುಕು ಬಿಡಲು ಕಾರಣವಾಗುತ್ತದೆ. ಯಾವುದೇ ಒಂದು ರಾಷ್ಟ್ರಕ್ಕೆ ಸಹಾಯ ಮಾಡಿದರು ಇದು ಭಾರತದ ಆರ್ಥಿಕತೆ ಮತ್ತು ಭದ್ರತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.
ಭಾರತ ಏನು ಮಾಡಬಹುದು?: ಇಂತಹ ಇಕ್ಕಟ್ಟಿನ ಸಂದರ್ಭದಲ್ಲಿ ಭಾರತಕ್ಕೆ ಅನುಕೂಲಕರ ಎಂದು ಸಾಬೀತುಪಡಿಸುವ ಏಕೈಕ ಸ್ಥಾನವೆಂದರೆ ಎರಡೂ ಕಡೆಯವರಿಗೆ ಸಂವಾದಾತ್ಮಕ ವೇದಿಕೆಯನ್ನು ಒದಗಿಸುವುದು. ಎರಡೂ ರಾಷ್ಟ್ರಗಳೊಡನೆ ಸಂವಾದ ನಡೆಸಿ ತಟಸ್ಥ ನೀತಿಯಲ್ಲಿಯೇ ಮುಂದುವರೆಯುವುದು ಒಳಿತು.
ಭಾರತಕ್ಕೆ ಲಭ್ಯವಿರುವ ಅತ್ಯುತ್ತಮ ಮಾರ್ಗ ಎಂದರೆ ಅದು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದು ಎಂದು ಪರಿಣಿತರು ಹೇಳುತ್ತಾರೆ. ಆಗ ಎರಡೂ ದೇಶಗಳ ಜೊತೆ ಭಾರತ ಸಂಬಂಧ ಗಟ್ಟಿಗೊಳಿಸುವ ದೊಡ್ಡ ಅವಕಾಶವನ್ನು ತನ್ನದಾಗಿಸಿಕೊಂಡಂತಾಗುತ್ತದೆ. ಈ ರಾಷ್ಟ್ರಗಳ ಒಡನಾಟದಲ್ಲಿ ದೃಢವಾದ ನೆಲೆ ಸ್ಥಾಪಿಸಲು ಇದೊಂದು ಅವಕಾಶವಾಗಿದೆ.
ಇದನ್ನೂ ಓದಿ: ರಷ್ಯಾ - ಉಕ್ರೇನ್ ಸಮರ: ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ ಉಕ್ರೇನ್ ರಾಯಭಾರಿ