ಮೀರತ್: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವಳಿ ಸಹೋದರರಿಬ್ಬರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಒಟ್ಟಿಗೆ ಹುಟ್ಟಿ, ಒಟ್ಟೊಟ್ಟಾಗಿ ಬೆಳೆದು, ಇದೀಗ ಜೊತೆ ಜೊತೆಯಾಗೇ ಪ್ರಾಣಬಿಟ್ಟಿದ್ದಾರೆ.
ಸೇಂಟ್ ಥಾಮಸ್ ಇಂಗ್ಲಿಷ್ ಮಧ್ಯಮ ಶಾಲೆಯ ಶಿಕ್ಷಕ ಗ್ರೆಗೊರಿ ರಾಫೆಲ್ ಮತ್ತು ಸೋಜಾ ಗ್ರೆಗೊರಿ ಅವರ ಇಬ್ಬರೂ ಮಕ್ಕಳು ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
![twin-brothers-dies-on-the-same-day-due-to-corona-in-meerut](https://etvbharatimages.akamaized.net/etvbharat/prod-images/11804916_987_11804916_1621385899633.png)
10 ದಿನಗಳ ಹಿಂದೆ, ಅವಳಿ ಸಹೋದರರಾದ ಆಲ್ಫ್ರೆಡ್ ಮತ್ತು ಜೋಫ್ರೆಡ್ ಇಬ್ಬರೂ ಯುವಕರನ್ನು ಆನಂದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಅವಳಿ ಸಹೋದರರಿಬ್ಬರೂ ಎಂಜಿನಿಯರ್‌ಗಳಾಗಿದ್ದು, ಓರ್ವ ಹೈದರಾಬಾದ್‌ನಲ್ಲಿದ್ದ. ಮತ್ತೋರ್ವ ಬೆಂಗಳೂರು ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಲಾಕ್ಡೌನ್ ಹಿನ್ನೆಲೆ ಇಬ್ಬರೂ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಸೋಂಕು ದೃಢಪಟ್ಟಿತ್ತು. ಅಲ್ಲದೇ ಉಸಿರಾಟದ ತೊಂದರೆ ಇದ್ದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ , ಕೇವಲ 24 ನೇ ವಯಸ್ಸಿನಲ್ಲಿಯೇ ಇಬ್ಬರು ಸಹೋದರರು ಒಟ್ಟಿಗೆ ಬಾರದಲೋಕಕ್ಕೆ ತೆರಳಿದ್ದಾರೆ.