ಭುವನೇಶ್ವರ್(ಒಡಿಶಾ): ವಿವಿಧ ಜನವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ದೇಶದಾದ್ಯಂತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ಇಂದೂ ಕೂಡ ಮುಷ್ಕರ ಮುಂದುವರಿಯಲಿದೆ. ಈ ಮುಷ್ಕರದ ಬಿಸಿ ಕೆಲವೆಡೆ ತಟ್ಟಿದ್ದರೆ, ಮತ್ತೆ ಹಲವೆಡೆ ಅಂಥಹ ಪರಿಣಾಮವೇನೂ ಬೀರಿಲ್ಲ. ಆದರೆ ಮುಷ್ಕರದ ಮೊದಲ ದಿನವಾದ ಸೋಮವಾರ ಒಡಿಶಾದಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕ ಸಾರಿಗೆಯು ರಸ್ತೆಯಿಂದ ಹೊರಗುಳಿದಿತ್ತು. ರೈಲು ಸೇವೆಗಳಿಗೂ ತೊಂದರೆಯಾಗಿತ್ತು.
ಮುಷ್ಕರದ ಪರಿಣಾಮ ಭುವನೇಶ್ವರ್, ಕಟಕ್, ಸಂಬಲ್‌ಪುರ, ಬೆರ್ಹಾಂಪುರ ಮತ್ತು ಕೈಗಾರಿಕಾ ವಲಯಗಳಲ್ಲಿ ಸಾರಿಗೆ ಸೇವೆಗಳು ಅಸ್ತವ್ಯಸ್ತಗೊಂಡಿವೆ. ರಾಜ್ಯದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನೂರಾರು ಟ್ರಕ್‌ಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಭುವನೇಶ್ವರ್, ಬೆರ್ಹಾಂಪುರ ಮತ್ತು ಇತರ ಕೆಲವು ರೈಲು ನಿಲ್ದಾಣಗಳಲ್ಲಿ 'ರೈಲ್ ರೋಕೋ' ಚಳವಳಿ ನಡೆಸಿದ ಹಿನ್ನೆಲೆ ರೈಲು ಸೇವೆಗಳಿಗೆ ಭಾರಿ ತೊಂದರೆಯಾಯಿತು. ಇನ್ನೂ ಮುಷ್ಕರದಿಂದಾಗಿ ಬ್ಯಾಂಕ್‌ಗಳ ಸೇವೆಗಳ ಮೇಲೂ ಭಾರಿ ಪರಿಣಾಮ ಬೀರಿತು..
ಪೆಟ್ರೋಲಿಯಂ ಡೀಲರ್ಸ್ ಯೂನಿಯನ್ ಮುಷ್ಕರದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದರೂ ಮುಷ್ಕರದ ಭುವನೇಶ್ವರದಲ್ಲಿ ಇಂಧನ ಮಳಿಗೆಗಳನ್ನು ಮುಚ್ಚಲಾಗಿತ್ತು. ಮಾರ್ಚ್ 28 ಮತ್ತು 29 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಸಹ ಹಲವಾರು ವಿಶ್ವವಿದ್ಯಾಲಯಗಳು ಮುಂದೂಡಿವೆ. ಆರೋಗ್ಯ ಸೇವೆಗಳು ಮುಷ್ಕರದ ವ್ಯಾಪ್ತಿಯಿಂದ ಹೊರಗುಳಿಯುತ್ತವೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿದ್ದರೂ ಕೂಡ, ಭುವನೇಶ್ವರದಲ್ಲಿ ಕಾರ್ಮಿಕ ಸಂಘದ ಸದಸ್ಯರು ಆ್ಯಂಬುಲೆನ್ಸ್ ತಡೆದಿದ್ದಾರೆ.
ಇದನ್ನೂ ಓದಿ: ಪ್ರೇಯಸಿಯ ಭಾವನೆಗಳೊಂದಿಗೆ ಆಟವಾಡಿ 10 ಲಕ್ಷ ರೂ ವಂಚಿಸಿದ ಪ್ರಿಯಕರ
ಮುಷ್ಕರವನ್ನು ಬೆಳಗ್ಗೆ 6 ರಿಂದ ಸಂಜೆ 4 ರವರೆಗೆ ಆಚರಿಸಲಾಯಿತು ಎಂದು ಜಂಟಿ ವೇದಿಕೆಯ ಸದಸ್ಯರಲ್ಲಿ ಒಬ್ಬರಾದ ಹಿಂದ್ ಮಝ್ದೂರ್ ಸಭಾ (ಹೆಚ್‌ಎಂಎಸ್)ದ ರಾಜ್ಯ ಅಧ್ಯಕ್ಷ ಕೃಸ್ನ ಚಂದ್ರ ಪಾತ್ರ ತಿಳಿಸಿದ್ದಾರೆ.