ತಂಜಾವೂರ್(ತಮಿಳುನಾಡು) : 23 ವರ್ಷದ ಮಹಿಳೆಯೊಬ್ಬಳು ಆಗಷ್ಟೇ ಜನಿಸಿದ ನವಜಾತ ಶಿಶುವಿನ ಕೊಲೆ ಮಾಡಿ ಟಾಯ್ಲೆಟ್ ಫ್ಲಶ್ನಲ್ಲಿ ಶವ ಎಸೆದಿರುವ ಘಟನೆ ತಮಿಳುನಾಡಿನ ತಂಜಾವೂರ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವಾಹೇತರ ಸಂಬಂಧ ಹೊಂದಿದ್ದ 23 ವರ್ಷದ ಯುವತಿ ಗರ್ಭಿಣಿಯಾಗಿದ್ದಳು. ಡಿಸೆಂಬರ್ 3ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ, ಅದನ್ನ ಕೊಂದು ತಂಜಾವೂರಿನ ವೈದ್ಯಕೀಯ ಕಾಲೇಜಿನ ಶೌಚಾಲಯದ ಫ್ಲಶ್ನಲ್ಲಿ ಎಸೆದು ಪರಾರಿಯಾಗಿದ್ದಾಳೆ. ಡಿಸೆಂಬರ್ 4ರಂದು ಆಸ್ಪತ್ರೆ ಕಾರ್ಮಿಕರು ಶೌಚಾಲಯದ ಫ್ಲಶ್ ಸರಿಯಾಗಿ ಕೆಲಸ ಮಾಡದಿರುವುದನ್ನ ಗಮನಿಸಲು ಮುಂದಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿರಿ: ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ಕೊಡಿ ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ಒತ್ತಾಯ
ತಕ್ಷಣವೇ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ಇದರ ಬೆನ್ನಲ್ಲೇ ಆಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯ ವಶಕ್ಕೆ ಪಡೆದು ವೀಕ್ಷಣೆಗೊಳಪಡಿಸಿದಾಗ ಡಿಸೆಂಬರ್ 3ರಂದು ಗರ್ಭಿಣಿಯೊಬ್ಬರು ತುರ್ತು ನಿಗಾ ಘಟಕದ ವಾರ್ಡ್ನ ಶೌಚಾಲಯದ ಬಳಿ ಮಗುವಿನೊಂದಿಗೆ ಹೋಗುತ್ತಿರುವುದು ಪತ್ತೆಯಾಗಿತ್ತು.
ಸಿಸಿಟಿವಿ ದೃಶ್ಯ ಆಧಾರದ ಮೇಲೆ ಈಗಾಗಲೇ ಪ್ರಿಯದರ್ಶಿನಿ ಎಂಬ ಯುವತಿಯನ್ನ ಬಂಧಿಸಲಾಗಿದೆ. ಆಕೆಯ ವಿರುದ್ಧ ಸೆಕ್ಷನ್ 318 ಸೇರಿದಂತೆ ಅನೇಕ ಕಲಂಗಳ ಅಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಯುವತಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.