ಚೆನ್ನೈ: ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಡುವೆ ತಮಿಳುನಾಡು ಸರ್ಕಾರ ಈಗಾಗಲೇ ಅಸ್ತಿತ್ವದಲ್ಲಿರುವ ಕೋವಿಡ್ ನಿರ್ಬಂಧಗಳನ್ನು ಜನವರಿ 31 ರವರೆಗೆ ವಿಸ್ತರಿಸಿದೆ. ಧಾರ್ಮಿಕ ಪೂಜಾ ಸ್ಥಳಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ಹೊಸ ನಿರ್ಬಂಧಗಳನ್ನು ವಿಧಿಸಿದೆ.
ಜನವರಿ 6 ರಿಂದ ವಿಧಿಸಲಾದ ರಾತ್ರಿ ಕರ್ಫ್ಯೂ ಈ ತಿಂಗಳ ಅಂತ್ಯದವರೆಗೆ ಮುಂದುವರಿಯುತ್ತದೆ ಮತ್ತು ಜನವರಿ 16 (ಭಾನುವಾರ) ರಂದು ಸಂಪೂರ್ಣ ಲಾಕ್‌ಡೌನ್ ಇರುತ್ತದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ತಮಿಳುನಾಡಿನಲ್ಲಿ 13,990 ಹೊಸ ಸೋಂಕುಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 62,767ಕ್ಕೆ ಏರಿದೆ. ಡಿಸೆಂಬರ್ 31, 2021 ರಂದು ವಿಸ್ತರಿಸಿದ ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ವಿಸ್ತರಿಸುವ ನಿರ್ಧಾರವನ್ನು ಇಲ್ಲಿ ಎಂಕೆ ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಅಧಿಕಾರಿಗಳು ಮತ್ತು ವೈದ್ಯಕೀಯ ತಜ್ಞರ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಚೀನಾದೊಂದಿಗಿನ ಗಡಿ ವಿವಾದದಲ್ಲಿ ಅಮೆರಿಕ ಭಾರತದ ಪರ ನಿಲ್ಲುತ್ತದೆ: ಶ್ವೇತಭವನ
ಜನವರಿ ಮಧ್ಯದ ಪೊಂಗಲ್ (ಸುಗ್ಗಿಯ) ಹಬ್ಬದ ದೃಷ್ಟಿಯಿಂದ ಜನರು ತಮ್ಮ ಊರುಗಳಿಗೆ, ಜಿಲ್ಲೆಗಳಿಗೆ ತಲುಪಲು ಅನುವು ಮಾಡಿಕೊಡಲು ಸರ್ಕಾರವು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಿದೆ. ಇದರ ನಡುವೆ ಜನಸಂದಣಿಯನ್ನು ತಡೆಗಟ್ಟುವ ಉದ್ದೇಶದಿಂದ ಜನವರಿ 14 ರಿಂದ 18 ರವರೆಗೆ ಎಲ್ಲ ಧಾರ್ಮಿಕ ಪೂಜಾ ಸ್ಥಳಗಳಲ್ಲಿ ಪೂಜೆ ನಿಷೇಧಿಸಲಾಗಿದೆ.