ಚೆನ್ನೈ: ಸರ್ಕಾರಿ ಶಾಲೆಗಳನ್ನು ಓದುವ ವಿದ್ಯಾರ್ಥಿಗಳಿಗೆ ಕೃಷಿ, ಕಾನೂನು, ಮೀನುಗಾರಿಕೆ ಹಾಗೂ ಇಂಜಿನಿಯರಿಂಗ್ ಸೇರಿದಂತೆ ಹಲವು ವೃತ್ತಿಪರ ಕೋಸ್‌ಗಳಲ್ಲಿ ಶೇ.7.5 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸಿಎಂ ಎಂ.ಕೆ.ಸ್ಟಾಲಿನ್ ಅಲ್ಲಿನ ವಿಧಾನಸಭೆ ಕಲಾಪದಲ್ಲಿ ಮಂಡಿಸಿದ್ದಾರೆ.
ಮಸೂದೆ ಮಂಡಿಸಿ ಮಾತನಾಡಿದ ಸಿಎಂ ಸ್ಟಾಲಿನ್, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ಓದುತ್ತಿರುವ ಬಡ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ಈ ಕಾಯ್ದೆ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಮಹತ್ವದ ಮಸೂದೆಗೆ ಬೆಂಬಲ ಘೋಷಿಸಿ ಮಾತನಾಡಿದ ಪ್ರತಿ ಪಕ್ಷ ನಾಯಕ, ಮಾಜಿ ಸಿಎಂ ಕೆ.ಪಳನಿಸ್ವಾಮಿ, ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಮಸೂದೆ ಅವಿರೋಧವಾಗಿ ಅಂಗೀಕಾರ ಪಡೆಯಲಿದೆ ಎಂದರು. ಎಂಬಿಬಿಎಸ್ ಸೇರಿದಂತೆ ವೈದ್ಯಕೀಯ ಕೋರ್ಸ್‌ಗಳಿಗೆ ಹೋಗುವ ಸರ್ಕಾರಿ ಶಾಲೆಗಳಲ್ಲಿ ಓದಿ ನೀಟ್ ಪಾಸ್ ಮಾಡಿರುವ ವಿದ್ಯಾರ್ಥಿಗಳಿಗೆ 7.5 ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಈ ಹಿಂದಿನ ಎಐಡಿಎಂಕೆ ಸರ್ಕಾರ ಮಂಡಿಸಿತ್ತು.
ಇದನ್ನೂ ಓದಿ: ತಮಿಳುನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ ಶೇ.7.5ರಷ್ಟು ಮೀಸಲು
ಆಗಸ್ಟ್ ಮೊದಲ ವಾರದಲ್ಲಿ ಸಿಎಂ ಎಂ.ಕೆ.ಸ್ಟಾಲಿನ್ ಸಚಿವ ಸಂಪುಟ ಸಭೆಯಲ್ಲಿ ಇಂದು ಮಂಡಿಸಿರುವ ಮಸೂದೆ ಬಗ್ಗೆ ನಿರ್ಧಾರವನ್ನು ಪ್ರಕಟಿಸಿದ್ದರು. ಅಲ್ಲದೇ, ಈ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸುವುದಾಗಿಯೂ ಘೋಷಿಸಿದ್ದರು.