ಗಾಜಿಪುರ : ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ದೆಹಲಿ ಗಡಿ ಪ್ರದೇಶಗಳಲ್ಲಿ ಠಿಕಾಣಿ ಹೂಡಿರುವ ರೈತರು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಗಾಜಿಪುರ ಗಡಿ ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ. 6ರಂದು ದೆಹಲಿ ಹೊರತುಪಡಿಸಿ ರಾಷ್ಟ್ರಾದ್ಯಂತ ಚಕ್ಕಾ ಜಾಮ್ ಅಂದರೆ ರಸ್ತೆ ದಿಗ್ಭಂಧನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದರು.
ನಾವು ದೆಹಲಿಯಲ್ಲಿ ಏನನ್ನೂ ಮಾಡಲು ಹೋಗುತ್ತಿಲ್ಲ. ಅಲ್ಲಿನ ರಾಜನೇ ಅದನ್ನು ಬಂಧಿಯಾಗಿಸಿದ್ದಾರೆ. ಹಾಗಾಗಿ, ನಾವು ಅಲ್ಲಿ ಜಾಮ್ ಮಾಡುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: ರೈತ ಚಳವಳಿ ಬಗ್ಗೆ ಸಲ್ಮಾನ್ ಖಾನ್ ಹೇಳಿದ್ದೇನು...?
ಫೆ.6ರಂದು ಮೂರು ಗಂಟೆಗಳ ಕಾಲ ರಸ್ತೆಯನ್ನು ದಿಗ್ಭಂಧನ ಮಾಡಲಾಗುವುದು. ದೆಹಲಿ ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಚಕ್ಕಾ ಜಾಮ್ ನಡೆಸಲಾಗುವುದು. ಚಕ್ಕಾ ಜಾಮ್‌ನಲ್ಲಿ ಸಿಲುಕುವ ವಾಹನ ಸವಾರರಿಗೆ ರೈತರೇ ನೀರು, ಆಹಾರ ನೀಡಲಿದ್ದಾರೆ. ಇದೇ ವೇಳೆ ಜನರಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು.
ರೈತರ ಪ್ರತಿಭಟನೆ ಹಿನ್ನೆಲೆ ದೆಹಲಿ ಗಡಿಭಾಗಗಳಾದ ಗಾಜಿಪುರ, ಟಿಕ್ರಿ ಹಾಗೂ ಸಿಂಘು ಬಳಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ರೈತರ ಸಂಚಾರವನ್ನು ತಡೆಯಲು ರಸ್ತೆಗಳಲ್ಲಿ ಮೊಳೆ, ಕಾಂಕ್ರೀಟ್ ಬ್ಯಾರಿಕೇಡ್ ಹಾಗೂ ತಂತಿಗಳನ್ನು ಅಳವಡಿಸಲಾಗಿದೆ.
ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಗಳಲ್ಲಿ ನೀರು, ವಿದ್ಯುತ್ ಮತ್ತು ಇಂಟರ್ನೆಟ್ ಸ್ಥಗಿತಗೊಳಿಸಿದ ಸರ್ಕಾರದ ನೀತಿ ಖಂಡಿಸಿ ಫೆಬ್ರವರಿ 6ರಂದು ರಸ್ತೆಗಳನ್ನು ಬಂದ್ ಮಾಡಲಾಗುವುದು ಎಂದು ರೈತ ಸಂಘಟನೆಗಳು ತಿಳಿಸಿವೆ.