ನಿಜಾಮಾಬಾದ್(ತೆಲಂಗಾಣ): ಅಂಗಡಿಯಲ್ಲಿ ಮಲಗಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಮೂವರನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ನಿಜಾಮಾಬಾದ್ನಲ್ಲಿ ನಡೆದಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.
ನಿಜಾಮಾಬಾದ್ನ ದಿಚ್ಪಲ್ಲಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಇಲ್ಲಿನ ಹಾರ್ವೆಸ್ಟರ್ ಮೆಕ್ಯಾನಿಕ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನ ಹರ್ಪಾಲ್ ಸಿಂಗ್, ಜೋಗಿಂದರ್ ಸಿಂಗ್ ಎಂದು ತಿಳಿದು ಬಂದಿದ್ದು, ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ. ಇವರು ಮೂಲತಃ ಪಂಜಾಬ್ ನವರು ಎನ್ನಲಾಗಿದೆ.
ಜೀವನೋಪಾಯಕ್ಕಾಗಿ ತೆಲಂಗಾಣಕ್ಕೆ ಬಂದು ಕೆಲಸ ಮುಗಿಸಿ ರಾತ್ರಿ ವೇಳೆ ಅಂಡಿಯಲ್ಲಿ ಮಲಗಿದ್ದರು. ಈ ವೇಳೆ, ಕೆಲ ಅಪರಿಚಿತರು ಅವರ ಮೇಲೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಬೆಳಗ್ಗೆ ಕೆಲವರು ಅಲ್ಲಿಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ನಿಜಾಮಾಬಾದ್ ಪೊಲೀಸ್ ಆಯುಕ್ತ ಕಾರ್ತಿಕೇಯ ಮತ್ತು ಡಿಸಿಪಿ ಅರವಿಂದ್ ಬಾಬು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.