ಭೋಪಾಲ್(ಮಧ್ಯ ಪ್ರದೇಶ): ಗುನಾ ಜಿಲ್ಲೆಯಲ್ಲಿ ಕೃಷ್ಣ ಮೃಗಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಕೃಷ್ಣ ಮೃಗಗಳನ್ನು ಖದೀಮರು ಬೇಟೆಯಾಡುವ ಪ್ರಕರಣಗಳು ನಡೆಯುತ್ತಿರುತ್ತವೆ. ಅದೇ ರೀತಿ ಇಂದು ಬೆಳಗಿನಜಾವ ಕೃಷ್ಣ ಮೃಗಗಳ ಕಳ್ಳ ಬೇಟೆಗೆ ದುಷ್ಕರ್ಮಿಗಳು ಹೊಂಚು ಹಾಕಿದ್ದರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಈ ವೇಳೆ ಎರಡು ಗುಂಪುಗಳ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಪೊಲೀಸರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಏನಿದು ಘಟನೆ: ಆರೋನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೇಟೆಗಾರರು ಕೃಷ್ಣಮೃಗಗಳನ್ನು ಬೇಟೆಯಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಪೊಲೀಸರು ಗುನಾ ಶಾರೋಕ್ ಅರಣ್ಯ ಪ್ರದೇಶಕ್ಕೆ ತಲುಪಿದ್ದರು. ಅಷ್ಟೊತ್ತಿಗೆ ಕಳ್ಳ ಬೇಟೆಗಾರರು ನಾಲ್ಕು ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದರು.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬೇಟೆಗಾರರನ್ನು ಸುತ್ತುವರಿದಿದ್ದಾರೆ. ಪೊಲೀಸರನ್ನು ಕಂಡ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಸಬ್ ಇನ್ಸ್‌ಪೆಕ್ಟರ್, ದಿವಾನ್ ಮತ್ತು ಕಾನ್‌ಷ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಓದಿ: ಕೃಷ್ಣ ಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ಗೆ ರಿಲೀಫ್
ಸುದ್ದಿ ತಿಳಿಯುತ್ತಿದ್ದಂತೆ ಉನ್ನತ ಅಧಿಕಾರಿಗಳು ಸೇರಿದಂತೆ ಮೂರು ಠಾಣೆಗಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಗಾಯಗೊಂಡ ಚಾಲಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ದುಷ್ಕರ್ಮಿಗಳು ಬಿಟ್ಟು ಹೋಗಿದ್ದ 3-4 ಕೃಷ್ಣಮೃಗಗಳ ಶವ ಮತ್ತು ನವಿಲಿನ ಕೆಲವು ಅವಶೇಷಗಳು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಚಿವ ಸಂತಾಪ: ಎನ್‌ಕೌಂಟರ್‌ನಲ್ಲಿ ಎಸ್‌ಐ ರಾಜ್‌ಕುಮಾರ್ ಜಾತವ್, ಕಾನ್ಸ್ಟೇಬಲ್ಗಳಾದ ನೀರಜ್ ಭಾರ್ಗವ್ ಮತ್ತು ಸಂತ್ರಮ್ ಸಾವನ್ನಪ್ಪಿದ್ದಾರೆ. ಮೃತರು ಶಿವಪುರಿ ಮತ್ತು ಗ್ವಾಲಿಯರ್ನ ನಿವಾಸಿಗಳಾಗಿದ್ದಾರೆ. ಮೃತ ಪೊಲೀಸರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದ್ದು, ಸುದ್ದಿ ತಿಳಿದ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಉಸ್ತುವಾರಿ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಗುನಾ ಜಿಲ್ಲೆಯಲ್ಲಿ ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಮೂವರು ಪೊಲೀಸರನ್ನು ಹತ್ಯೆ ಮಾಡಿದ್ದಾರೆ. ರಾಜ್ಯ ರಾಜಧಾನಿಯಿಂದ ಸುಮಾರು 160 ಕಿ.ಮೀ. ದೂರದಲ್ಲಿರುವ ಆರೋನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮುಂಜಾನೆ 3 ಗಂಟೆಯ ಸುಮಾರಿಗೆ ಪೊಲೀಸ್ ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ನಿವಾಸದಲ್ಲಿ ಬೆಳಗ್ಗೆ 9.30 ಕ್ಕೆ ಉನ್ನತ ಮಟ್ಟದ ತುರ್ತು ಸಭೆ ಕೈಗೊಂಡಿದ್ದರು ಎನ್ನಲಾಗ್ತಿದೆ. ಸಭೆಯಲ್ಲಿ ಡಿಜಿಪಿ, ಗೃಹ ಸಚಿವರು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.