ಭುವನೇಶ್ವರ: ನಾನವನಲ್ಲ... ನಾನವನಲ್ಲ... ನಾನವನಲ್ಲ... ಎಂಬ ಉಪೇಂದ್ರ ಅವರ ಸಿನಿಮಾವೊಂದರ ಸಂಭಾಷಣೆ ನಿಮಗೆ ಗೊತ್ತೇ ಇರಬೇಕು. ಅಲ್ಲಿ ವಿವಾಹವಾದ ದಂಪತಿಗಳ ಜೀವನ ಸರಿ ಮಾಡಲು ನಟ ಯಶಸ್ವಿಯಾಗಿ ಕೋರ್ಟ್ನಲ್ಲಿ ವಾದ ಮಾಡಿ ಗೆಲ್ಲುತ್ತಾನೆ. ಆದರೆ, ಈ ನಿಜವಾದ ವರದಿಯಲ್ಲಿ ಆರೋಪಿ ಬರೋಬ್ಬರಿ 17 ಯುವತಿಯರನ್ನು ವಿವಾಹವಾಗಿದ್ದು, ನಾನವನಲ್ಲ ಎನ್ನುತ್ತಿದ್ದಾನೆ.
ವಿವಿಧ ರಾಜ್ಯಗಳ ಮಧ್ಯವಯಸ್ಕ, ವಿದ್ಯಾವಂತ ಮತ್ತು ಸ್ಥಿತಿವಂತ ಮಹಿಳೆಯರನ್ನು ವಿವಾಹವಾದ ಒಡಿಶಾದ 66 ವರ್ಷದ ಪುರುಷನ ಪಟ್ಟಿಯಲ್ಲಿ ಇನ್ನೂ ಮೂರು ಪ್ರಕರಣಗಳು ಮುಂಚೂಣಿಗೆ ಬರುವುದರೊಂದಿಗೆ ಪತ್ನಿಯರ ಸಂಖ್ಯೆ 17 ಕ್ಕೆ ಏರಿದೆ.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿ 14 ಬಾರಿ ಮದುವೆಯಾಗಿದ್ದ ಎಂದು ಈ ಹಿಂದೆ ಆರೋಪಿಸಲಾಗಿತ್ತು. ಈಗ ವಿಚಾರಣೆ ನಡೆಸಿದಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ವೈದ್ಯರ ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈತ, ತನ್ನ ಕುತಂತ್ರ ಬುದ್ದಿ ತೋರಿಸಿ ವಿವಾಹವಾಗುತ್ತಿದ್ದ. ಛತ್ತೀಸ್ಗಡದ ಚಾರ್ಟೆಡ್ ಅಕೌಂಟೆಂಟ್ ಹಾಗೂ ಅಸ್ಸೋಂನ ವೈದ್ಯೆ , ಉನ್ನತ ವ್ಯಾಸಾಂಗ ಮಾಡಿದ್ದ ಯುವತಿಯನ್ನು ವಿವಾಹವಾಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಅಷ್ಟೇ ಅಲ್ಲ ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ವಿದ್ಯಾರ್ಥಿಗೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಭರವಸೆ ನೀಡಿ 18 ಲಕ್ಷ ರೂ. ವಂಚಿಸಿರುವ ಆರೋಪ ಸಹ ಕೇಳಿ ಬಂದಿದೆ.
ಆತನ ಮೊಬೈಲ್ ಫೋನ್‌ಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗುವುದು ಮತ್ತು ಅವರ ಹಣಕಾಸಿನ ವಹಿವಾಟುಗಳನ್ನು ತನಿಖೆ ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯ ಬಳಿ ಮೂರು ಪಾನ್ ಕಾರ್ಡ್‌ಗಳು ಮತ್ತು 11 ಎಟಿಎಂ ಕಾರ್ಡ್‌ಗಳು ಪತ್ತೆಯಾಗಿರುವುದರಿಂದ ಆರ್‌ಬಿಐ ಸಹಾಯವನ್ನೂ ಕೋರಲಾಗಿದೆ. ಇನ್ನು ಈತನ ಒಟ್ಟು ಪತ್ನಿಯರಲ್ಲಿ ನಾಲ್ವರು ಒಡಿಶಾದಲ್ಲಿ, ಮೂವರು ದೆಹಲಿಯಲ್ಲಿ, ಮೂವರು ಅಸ್ಸೋಂನಲ್ಲಿ, ತಲಾ ಇಬ್ಬರು ಮಧ್ಯಪ್ರದೇಶ ಮತ್ತು ಪಂಜಾಬ್‌ನಲ್ಲಿ ಮತ್ತು ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಬ್ಬರು ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಅಗೋಚರ ಬಾಬಾ ಜೊತೆ ಸಂಪರ್ಕ: ಎನ್‌ಎಸ್‌ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣನ್ ಆಸ್ತಿ ಪಾಸ್ತಿ ಮೇಲೆ ಐಟಿ ದಾಳಿ
ಈ ನಕಲಿ ವೈದ್ಯ ರಮೇಶ್ ಚಂದ್ರ, ಡಾ ಬಿಭು ಪ್ರಕಾಶ್ ಸ್ವೈನ್ ಮತ್ತು ಡಾ ರಮಣಿ ರಂಜನ್ ಸ್ವೈನ್ ಎಂಬಂತಹ ವಿಭಿನ್ನ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದ. ರಮೇಶ್ ಚಂದ್ರ ಸ್ವೈನ್ ಒಡಿಶಾದ ಕೇಂದ್ರಪಾರಾ ಜಿಲ್ಲೆಯ ಕರಾವಳಿ ಹಳ್ಳಿಯವ.
2020 ರಲ್ಲಿ ವಿವಾಹವಾದ ದೆಹಲಿಯ ಅವರ ಇತ್ತೀಚಿನ ಹೆಂಡತಿಯ ಆರೋಪದ ಆಧಾರದ ಮೇಲೆ 38 ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಪ್ರೇಮಿಗಳ ದಿನದಂದೇ ಈತನ ಮೇಲೆ ಪೊಲೀಸರ ಹಾಗೂ ಈತ ಮೋಸ ಮಾಡಿದ ಯುವತಿಯರ ವಕ್ರದೃಷ್ಟಿ ಬಿದ್ದಿದೆ.
ಸ್ವೇನ್ 1982 ರಲ್ಲಿ ಮೊದಲ ಬಾರಿಗೆ ವಿವಾಹವಾದ್ದ ಮತ್ತು 2020 ರಲ್ಲಿ ಕೊನೆಯ ಮದುವೆಯಾಗಿದ್ದಾನೆ. ಅವರ ಕೊನೆಯ ಮದುವೆ ಶಿಕ್ಷಕಿಯೊಂದಿಗೆ ದೆಹಲಿಯ ಆರ್ಯ ಸಮಾಜ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತ್ತು.
ಆದಾಗ್ಯೂ, ಆರೋಪಗಳನ್ನು ತಳ್ಳಿಹಾಕಿರುವ ಆರೋಪಿ ನಾನು ಈ ಎಲ್ಲ ಮಹಿಳೆಯರನ್ನು ಮದುವೆಯಾಗಿಲ್ಲ ಮತ್ತು ನಾನು ನಿಜವಾಗಿಯೂ ವೈದ್ಯ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಈ ಹಿಂದೆ 2010ರಲ್ಲಿ ಹೈದರಾಬಾದ್‌ನಲ್ಲಿ ಮತ್ತು 2006ರಲ್ಲಿ ಎರ್ನಾಕುಲಂನಲ್ಲಿ ನಿರುದ್ಯೋಗಿ ಯುವಕರಿಗೆ ವಂಚನೆ ಕೂಡ ಮಾಡಿದ್ದು, ಈತನನ್ನು ಎರಡು ಬಾರಿ ಬಂಧಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.