ಪುಣೆ( ಮಹಾರಾಷ್ಟ್ರ):11 ವರ್ಷದ ಬಾಲಕನೊಬ್ಬನನ್ನು ಸುಮಾರು ಎರಡು ವರ್ಷಗಳಿಂದ ನಾಯಿಗಳೊಂದಿಗೆ ಲಾಕ್ ಮಾಡಲಾದ ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಂದ ಹಾಗೆ ಈ ಪ್ರಕರಣಕ್ಕೆ ಟ್ವಿಸ್ಟ್ವೊಂದು ಸಿಕ್ಕಿದೆ. ಬಾಲಕನ ಹೆತ್ತವರು ಶ್ವಾನಪ್ರೇಮಿಗಳಾಗಿದ್ದರಿಂದ ಅವರ ಮನೆಯಲ್ಲಿ ನಾಯಿಗಳನ್ನು ಸಾಕಲು ಆರಂಭಿಸಿದ್ದರಂತೆ.
ಪ್ರಕರಣದ ಬಗ್ಗೆ ಪೊಲೀಸರು ಹೇಳೋದೇನು?: ಸಹಜವಾಗೇ ತಮ್ಮ ಹೆತ್ತ ಮಗುವನ್ನು ಅವುಗಳೊಂದಿಗೆ ಬೆಳೆಸಿದ್ದೇನೆ ಎನ್ನುತ್ತಿದ್ದಾರಂತೆ ತಂದೆ ತಾಯಿ. ಹೀಗಂತಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಕುರಿತು ಮಾತನಾಡಿರುವ ಕೊಂಡ್ವಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕ ಸರ್ದಾರ್ ಪಾಟೀಲ್, ಮಗುವಿನ ಪೋಷಕರು ನಾವು ಶ್ವಾನ ಪ್ರಿಯರು ಎಂದು ಹೇಳುತ್ತಿದ್ದಾರೆ. ಹಾಗಾಗಿ ಮನೆಯಲ್ಲಿ ನಾಯಿಗಳನ್ನು ಸಾಕುತ್ತಿದ್ದರಂತೆ. ಈ ನಾಯಿಗಳ ಸಂಖ್ಯೆ ಬರು ಬರುತ್ತಾ 22ಕ್ಕೆ ಏರಿದೆ ಎಂಬುದಾಗಿ ಬಾಲಕನ ಪೋಷಕರು ಹೇಳಿಕೊಂಡಿದ್ದಾರೆ. ತಂದೆ ತಾಯಿ ಹೇಳಿಕೆ ಹೊರತಾಗಿಯೂ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖೆ ಮುಂದುವರೆದಿದೆ. ಶೀಘ್ರದಲ್ಲೇ ಪ್ರಕರಣದ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:20 ನಾಯಿಗಳೊಂದಿಗೆ ಕೋಣೆಯಲ್ಲಿ ಬಂಧಿಯಾಗಿದ್ದ ಬಾಲಕ: ಇಷ್ಟಕ್ಕೂ ಅವನನ್ನು ಇಲ್ಲಿರಿಸಿದ್ದೇಕೆ?
ದೂರು ನೀಡಿದ್ಯಾರು: ಬಾಲಕನ ತಂದೆ- ತಾಯಿ ವಾಸಿಸುವ ಕಟ್ಟಡದ ನಿವಾಸಿಗಳು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಬಾಲಕನಿದ್ದ ಮನೆಯಿಂದ ನಾಯಿಗಳ ಬೊಗಳುವಿಕೆ ಮತ್ತು ದುರ್ನಾತದ ಬರುತ್ತಿದ್ದರಿಂದ ನೆರೆ ಹೊರೆಯವರೇ ಪೊಲೀಸರಿಗೆ ದೂರು ನೀಡಿದ್ದರು. ಸಂತ್ರಸ್ತ ಬಾಲಕನ ಪೋಷಕರು ತಮ್ಮ ಮಗನನ್ನು ನಾಯಿಗಳ ಜೊತೆಯಲ್ಲಿಟ್ಟಿದ್ದು ಏಕೆ? ಅವರು ಯಾಕೆ ಹಾಗೆ ಮಾಡಿದರು? ಎಂಬುದು ಇದುವರೆಗೂ ಗೊತ್ತಾಗಿಲ್ಲ. ಈ ಬಗ್ಗೆಯೇ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಾನಸಿಕವಾಗಿ ಕುಗ್ಗಿರುವ ಪೋಷಕರು: ಆದರೆ, ಪೋಷಕರು ಮಾನಸಿಕವಾಗಿ ಕುಗ್ಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕೊರೊನಾ ಸಮಯದಲ್ಲಿ ಲಾಕ್‌ಡೌನ್‌ನಿಂದಾಗಿ ಹುಡುಗನನ್ನು ನಾಯಿಗಳೊಂದಿಗೆ ಮನೆಯಲ್ಲಿ ಬಹಳ ಸಮಯದಿಂದ ಲಾಕ್ ಮಾಡಲಾಗಿತ್ತು. ಆದರೆ, ನಂತರ ಶಾಲೆ ಆರಂಭವಾದಾಗ ಬಾಲಕ ನಾಯಿಯಂತೆ ವರ್ತಿಸತೊಡಗಿದ್ದ. ಆತ ನಾಯಿಗಳ ಜತೆಗೇ ಇರುತ್ತಿದ್ದರಿಂದ ತೀವ್ರ ವಾಸನೆಯಿಂದ ಕೂಡಿದ್ದ ಹಾಗೂ ದುರ್ನಾತ ಬೀರುತ್ತಿದ್ದ.
ಇನ್ನು ಬಾಲಕ ಶಾಲೆ ಹೋಗುತ್ತಿದ್ದ, ಈ ವೇಳೆ ಬಾಲಕ ಇತರ ವಿದ್ಯಾರ್ಥಿಗಳಿಗೆ ಕಚ್ಚುತ್ತಿದ್ದ ಎಂದು ಪೊಲೀಸರಿಗೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೊಂಡ್ವಾ ಪೊಲೀಸರು ಈಗಾಗಲೇ ಪೋಷಕರನ್ನು ಬಂಧಿಸಿದ್ದಾರೆ. ಆರೋಪಿ ಪೋಷಕರನ್ನು ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ತಿಳಿಸಿದ್ದಾರೆ.
ಹಿನ್ನೆಲೆ: 11 ವರ್ಷದ ಬಾಲಕ ನಾಯಿಯೊಂದಿಗೆ ಕೋಣೆಯಲ್ಲಿ ಬಂಧಿಯಾಗಿದ್ದನು. ಆದ್ದರಿಂದ ಹುಡುಗ ಕಿಟಕಿಯ ಬಳಿ ಕುಳಿತು ನಾಯಿಯಂತೆ ವರ್ತಿಸುತ್ತಾನೆ ಎಂಬ ಮಾಹಿತಿ, ಮಕ್ಕಳ ಸಹಾಯವಾಣಿಯ ಸಂಯೋಜಕಿ ಅಪರ್ಣಾ ಮೋದಕ್ ದೂರವಾಣಿ ಮೂಲಕ ಬಂದಿತ್ತು. ಆ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದ ಮಕ್ಕಳ ಸಹಾಯವಾಣಿ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ, 11 ವರ್ಷದ ಬಾಲಕ ಕೋಣೆಯೊಂದರಲ್ಲಿದ್ದು, ಆತನ ಸುತ್ತ 20 ರಿಂದ 22 ನಾಯಿಗಳು ಪತ್ತೆಯಾಗಿದ್ದವು. ಆ ನಂತರ ಅಪರ್ಣಾ ಮೋದಕ ಈ ಸಂಗತಿಯನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸಿದ್ದರು.
ತಂದೆ - ತಾಯಿ ವಿರುದ್ಧ ದೂರು: ಮೇಲಿನ ಅಧಿಕಾರಿಗಳ ನಿರ್ದೇಶನದಂತೆ ಕೊಂಡ್ವಾ ಪೊಲೀಸ್ ಠಾಣೆಗೆ ಆಗಮಿಸಿದ ಚೈಲ್ಡ್ ಲೈನ್ ಅಧಿಕಾರಿ ಅಪರ್ಣಾ ವಿವರವಾದ ದೂರು ದಾಖಲಿಸಿದ್ದರು. ಈ ದೂರು ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಇದನ್ನು ಓದಿ:ಬೆಕ್ಕಿನ ಮರಿ ಎಂದು ಚಿರತೆ ಮರಿ ಮನೆಗೆ ಹೊತ್ತು ತಂದ ಬಾಲಕ.. ಮುಂದೇನಾಯ್ತು!?