ವಿಜಯನಗರಂ(ಆಂಧ್ರಪ್ರದೇಶ): ಕೇರಳ, ಚಂಢಿಗಡ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ನ ಮೊದಲ ಕೇಸ್ ಇಂದು ಪತ್ತೆಯಾಗಿದೆ. ಅಲ್ಲದೇ ಕರ್ನಾಟಕದಲ್ಲಿ ಮೂರನೇ ಹಾಗೂ ಮಹಾರಾಷ್ಟ್ರದಲ್ಲಿ 18ನೇ ಕೇಸ್ ವರದಿಯಾಗಿದೆ. ಈ ಮೂಲಕ ಭಾರತದ ಒಮಿಕ್ರಾನ್ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.
ಐರ್ಲೆಂಡ್ನಿಂದ ಭಾರತಕ್ಕೆ ಬಂದಿದ್ದ ಆಂಧ್ರದ ವಿಜಯನಗರಂ ಮೂಲದ 34 ವರ್ಷದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಹೈದರಾಬಾದ್ನ ಸಿಸಿಎಂಬಿಗೆ ಕಳುಹಿಸಲಾಗಿತ್ತು. ಇದೀಗ ಆತನ ವರದಿ ಪಾಸಿಟಿವ್ ಬಂದಿದೆ. ಇತ್ತ ಇಟಲಿಯಿಂದ ಚಂಢಿಗಡಕ್ಕೆ ಹಿಂದಿರುಗಿದ್ದ 20 ವರ್ಷದ ಯುವಕನಿಗೆ ಒಮಿಕ್ರಾನ್ ಅಂಟಿರುವುದು ದೃಢಪಟ್ಟಿದೆ.
ಇನ್ನು ಇಂಗ್ಲೆಂಡ್ನಿಂದ ಕೇರಳದ ಕೊಚ್ಚಿಗೆ ಬಂದಿದ್ದ ವ್ಯಕ್ತಿಗೆ ಕೂಡ ಒಮಿಕ್ರಾನ್ ತಗುಲಿದ್ದು, ಆತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಇವರ ಹೆಂಡತಿ ಮತ್ತು ತಾಯಿಗೆ ಕೂಡ ಕೋವಿಡ್ ದೃಢಪಟ್ಟಿದ್ದು, ಐಸೋಲೇಷನ್ ವಾರ್ಡ್ನಲ್ಲಿರಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಇದನ್ನೂ ಓದಿ: India Covid Report: ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ, 7774 ಹೊಸ ಸೋಂಕಿತರು ಪತ್ತೆ
ಇಂದು ಕರ್ನಾಟಕದಲ್ಲಿ 34 ವರ್ಷದ ವ್ಯಕ್ತಿಗೆ ಕೂಡ ಹೊಸ ರೂಪಾಂತರಿ ದೃಢಪಟ್ಟಿದ್ದು, ಆತ ದಕ್ಷಿಣಾ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದನು. ರಾಜ್ಯದಲ್ಲಿ ಇದು ಮೂರನೇ ಒಮಿಕ್ರಾನ್ ಕೇಸ್ ಆಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಮತ್ತೊಂದೊ ಒಮಿಕ್ರಾನ್ ಸೋಂಕಿತ ಪತ್ತೆಯಾಗಿದ್ದು, ರಾಜ್ಯದ ಹೊಸ ರೂಪಾಂತರಿ ಕೇಸ್ಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಭಾರತದ ಒಮಿಕ್ರಾನ್ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆ
ಮಹಾರಾಷ್ಟ್ರ-18, ಕರ್ನಾಟಕ -3, ದೆಹಲಿ-2, ರಾಜಸ್ಥಾನ-9, ಗುಜರಾತ್-3, ಚಂಢಿಗಡ-1, ಆಂಧ್ರಪ್ರದೇಶ-1, ಕೇರಳ-1 ಸೇರಿ ಒಟ್ಟು 37 ಒಮಿಕ್ರಾನ್ ಕೇಸ್ಗಳು ದೇಶದಲ್ಲಿ ಈವರೆಗೆ ವರದಿಯಾಗಿದೆ. ಆಯಾ ರಾಜ್ಯ ಸರ್ಕಾರಗಳು ಒಮಿಕ್ರಾನ್ ನಿಯಂತ್ರಣಕ್ಕೆ ಈಗಾಗಲೇ ಮಾರ್ಗಸೂಚಿಗಳನ್ನು ಘೋಷಿಸಿವೆ.