ನವದೆಹಲಿ: ಈ ಹಿಂದೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಹಲವಾರು ವ್ಯಕ್ತಿಗಳು ದೇಶದ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿಗಳಾಗಿದ್ದು, ಈ ವಿಷಯದಲ್ಲಿ ಬೇರೆ ದೇಶಗಳಿಂದ ಕಲಿಯುವಂಥದ್ದು ಏನೂ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ. ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾದಂತೆ ಭಾರತವೂ ಅದೇ ಮಾರ್ಗದಲ್ಲಿ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದ ತನ್ನದೇ ಪಕ್ಷದ ನಾಯಕರಾದ ಪಿ. ಚಿದಂಬರಂ ಮತ್ತು ಶಶಿ ತರೂರ್ ಅವರ ಹೇಳಿಕೆಗಳನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಎಐಸಿಸಿ ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ವೈವಿಧ್ಯತೆಯನ್ನು ಗೌರವಿಸುವುದು ಹಲವು ವರ್ಷಗಳಿಂದ ಭಾರತದ ವಿಶಿಷ್ಟ ಲಕ್ಷಣವಾಗಿದೆ. ಹಲವಾರು ವರ್ಷಗಳ ಕಾಲ ದೇಶದ ಉನ್ನತ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿದ್ದ ಜಾಕೀರ್ ಹುಸೇನ್, ಫಕ್ರುದ್ದೀನ್ ಅಲಿ ಅಹಮದ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.
ಭಾರತೀಯ ಮೂಲದ ಸುನಕ್ ಬ್ರಿಟನ್ ಪ್ರಧಾನಿಯಾದ ನಂತರ, ಭಾರತವು ಬ್ರಿಟನ್ನಿಂದ ಪಾಠ ಕಲಿಯಬೇಕಿದೆ ಮತ್ತು ಮುಂದೊಂದು ದಿನ ಈ ಪದ್ಧತಿಯನ್ನು ದೇಶದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಚಿದಂಬರಂ ಮತ್ತು ತರೂರ್ ಆಶಿಸಿದ್ದರು.
ನಮ್ಮ ದೇಶದಲ್ಲಿ 1967 ರಲ್ಲಿ ಮೊದಲಿಗೆ ಡಾ.ಜಾಕೀರ್ ಹುಸೇನ್, ನಂತರ ಫಕ್ರುದ್ದೀನ್ ಅಲಿ ಅಹ್ಮದ್ ರಾಷ್ಟ್ರಪತಿಯಾದರು. ಡಾ. ಅಬ್ದುಲ್ ಕಲಾಂ ಕೂಡ ರಾಷ್ಟ್ರಪತಿಯಾಗಿದ್ದರು. ಬರ್ಕತುಲ್ಲಾ ಖಾನ್ ಮುಖ್ಯಮಂತ್ರಿಯಾದರು ಮತ್ತು ಎ.ಆರ್. ಅಂತುಲೇ ಮುಖ್ಯಮಂತ್ರಿಯಾದರು ಎಂದು ಮಾಧ್ಯಮಕ್ಕೆ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್, ನೀವು ಅವರನ್ನೇ ಕೇಳಬೇಕು. ನಾನು ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಮತ್ತು ಇತರ ನಾಯಕರ ಹೇಳಿಕೆಯ ಬಗ್ಗೆ ಮಾತನಾಡುವುದಿಲ್ಲ. ಅವರು ಏನು ಹೇಳಿದ್ದಾರೆಂದು ನೀವು ಅವರನ್ನೇ ಕೇಳಬೇಕು, ಬೇರೆ ಯಾವುದೇ ನಾಯಕರ ಟೀಕೆಗಳ ಮೇಲೆ ನಾನು ಮಾತನಾಡಲ್ಲ ಎಂದರು.
ಇದನ್ನೂ ಓದಿ: ವಿದೇಶಿ ನೆಲದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಭಾರತೀಯ ಸಂಜಾತರಿವರು..