ಹೈದರಾಬಾದ್: ಸಾಮಾನ್ಯವಾಗಿ ಕೆಲವೊಂದು ಗ್ರಾಮಗಳು ಅವುಗಳ ವಿಶೇಷತೆಯಿಂದ ಜಗತ್ತನ್ನು ತಮ್ಮತ್ತ ತಿರುಗಿ ನೋಡುವಂತೆ ಮಾಡುತ್ತದೆ. ಅಂತಹದ್ದೇ ಒಂದು ಗ್ರಾಮ ಸಂಸ್ಥಾನ್ ನಾರಾಯಣಪುರಂ ಮಂಡಲ್. ಈ ಗ್ರಾಮದಲ್ಲಿ ಲಾರಿಗಳದ್ದೇ ಕಾರುಬಾರು. 130 ಕುಟುಂಬಗಳಿರುವ ಈ ಗ್ರಾಮದಲ್ಲಿ ಪ್ರತಿ ಮನೆಯಲ್ಲೂ ಒಬ್ಬರು ಲಾರಿ ಉದ್ಯಮದಲ್ಲಿ ತೊಡಗಿದ್ದಾರೆ. ಲಾರಿ ಚಾಲಕರಿಂದ ಮಾಲೀಕರು, ಕ್ಲೀನರ್ವರೆಗೆ ವಿವಿಧ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಗ್ರಾಮವೂ ಕಳೆದ 45 ವರ್ಷದಿಂದ ಸಾರಿಗೆ ವಲಯದ ಮೇಲೆ ಅವಲಂಬಿತವಾಗಿದೆ. ಗ್ರಾಮದಲ್ಲಿ 150ಕ್ಕೂ ಹೆಚ್ಚು ಲಾರಿ ಇದ್ದು, ಕೆಲವರು ಒಂದು ಲಾರಿ ಒಡೆಯರಾದರೆ, ಮತ್ತೆ ಕೆಲವರು ನಾಲ್ಕು ವಾಹನಗಳ ಮಾಲೀಕರಾಗಿದ್ದಾರೆ.
ಏನಿದು ಲಾರಿಗಳ ಗ್ರಾಮ: ಆರಂಭದಲ್ಲಿ ಈ ಗ್ರಾಮಸ್ಥರು ಲಾರಿ ಕ್ಲೀನರ್ ಉದ್ಯಮವನ್ನು ಶುರು ಮಾಡಿದರು. ಬಳಿಕ ನಿಧಾನವಾಗಿ ಚಾಲಕರಾಗಿ ಹಾಗೇ ಮಾಲೀಕರೂ ಆದರು. ಇಲ್ಲಿನ ಕೆಲವು ಜನರಿಗೆ ವೃತ್ತಿಪರ ಚಾಲನೆ ತಿಳಿಯದಿದ್ದರೂ ಜೀವನೋಪಯಕ್ಕಾಗಿ ಲಾರಿ ಖರೀದಿಸಿ, ಅದಕ್ಕೆ ಕೆಲಸದವರನ್ನು ನೇಮಿಸಿದ್ದಾರೆ. ಸದ್ಯ ಇಲ್ಲಿನ ಬಹುತೇಕ ಯುವ ಪೀಳಿಗೆ ಲಾರಿ ಚಾಲಕರಾಗಿ ಹಿಂದಿನ ಪರಂಪರೆ ಮುಂದುವರೆಸಿದ್ದಾರೆ. ಉದ್ಯಮದ ಯಶಸ್ಸಿನ ನಡುವೆಯೇ ಇಲ್ಲಿನ ಜನರು ಕೋವಿಡ್ 19 ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿ, ಲಾಭದಾಯಕ ಆದಾಯ ಪಡೆಯಲು ಕಷ್ಟ ಪಟ್ಟಿದ್ದಾರೆ. ಇದರಿಂದಾಗಿ ಈ ಹಿಂದೆ ನಾಲ್ಕು ಲಾರಿಗಳನ್ನು ಹೊಂದಿದ್ದವರು. ಇದೀಗ ಆ ಲಾರಿಗಳ ಸಂಖ್ಯೆಯನ್ನು ಇಳಿಕೆ ಮಾಡಿದ್ದಾರೆ. ಮತ್ತೆ ಕೆಲವರು ಲಾರಿ ಮಾರಿ ಚಾಲಕರಾಗಿ ಸೇವೆ ಮುಂದುವರೆಸಿದ್ದಾರೆ.
ಮೊದಲ ಚಾಲಕ: 1980ರಲ್ಲಿ ಭಿಕ್ಷಪತ್ತಿ ತನ್ನ ಸ್ನೇಹಿತ ಯಾದಯ್ಯ ಜೊತೆ ಸೇರಿ ಗ್ರಾಮದಲ್ಲಿ ಮೊದಲ ಬಾರಿಗೆ ಲಾರಿ ಉದ್ಯಮಕ್ಕೆ ಕಾಲಿಟ್ಟರು. ಕ್ಲೀನರ್ ಆಗಿ ಸೇವೆಗೆ ಸೇರಿದ ಇವರು ನಿಧಾನವಾಗಿ ಚಾಲಕರಾಗಿ ಬಳಿಕ ಮಾಲೀಕರಾದರು. ಜೊತೆಗೆ ಸಾರಿಗೆ ಉದ್ಯಮದೊಂದಿಗೆ ಸಂಪರ್ಕ ಸಾಧಿಸಿದರು. ಗ್ರಾಮದ ಮೊದಲ ಲಾರಿ ಚಾಲಕ ಭಿಕ್ಷಪತ್ತಿಯಾಗಿದ್ದು, ಅವರ ಕುಟುಂಬ ಕೂಡ ಇದೇ ಉದ್ಯಮ ಮುಂದುವರೆಸಿದೆ.
ದಸರಾ ಸಂಭ್ರಮ: ಈ ಗ್ರಾಮದಲ್ಲಿ ದಸರಾ ಹಬ್ಬದಲ್ಲಿ ಸಂಭ್ರಮ, ಉತ್ಸಾಹ ಕಳೆಕಟ್ಟುತ್ತದೆ. ಎಲ್ಲಾ ಲಾರಿಗಳು ಗ್ರಾಮಕ್ಕೆ ಮರಳಿ, ಉತ್ಸಾಹದಿಂದ ಹಬ್ಬ ಆಚರಣೆಯಲ್ಲಿ ಭಾಗಿಯಾಗುತ್ತವೆ. ಈ ಗ್ರಾಮದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು ತೆಲಂಗಾಣ ರಾಜ್ಯ ಮರಳು ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಸುರ್ವಿ ಯಾದಯ್ಯ ಮತ್ತು ಆಟೋ ನಗರ ಮರಳು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುರ್ವಿ ರಾಜು ಗೌಡ್ ಆಗಿದ್ದಾರೆ. ವೃತ್ತಿಯಲ್ಲಿನ ಸವಾಲಿನ ಹೊರತಾಗಿ ಲಾರಿ ಉದ್ಯಮದೊಂದಿಗಿನ ಅವಿನಾಭಾವ ಸಂಬಂಧವನ್ನು ಗ್ರಾಮಸ್ಥರು ಮುಂದುವರೆಸಿದ್ದಾರೆ.
ಇದನ್ನೂ ಓದಿ: ತಾಯಿಯ ಪ್ರತಿಜ್ಞೆಯಿಂದ ಬದಲಾಯಿತು ಗ್ರಾಮ: ಸರ್ಕಾರಿ ಉದ್ಯೋಗಿಗಳ ನಾಡಾಗಿ ರೂಪುಗೊಂಡಿತು ತಾಂಡಾ!