ಮಂಗಳೂರು: ನವರಾತ್ರಿಯ ದಿನಗಳಲ್ಲಿ ಭಕ್ತರಿಗೆ ದೇವಾಲಯ ದರ್ಶನಕ್ಕೆ ಕಳೆದ ಎರಡು ವರ್ಷ ಕೆಎಸ್ಆರ್ಟಿಸಿಯಿಂದ 'ದಸರಾ ದರ್ಶಿನಿ' ಎಂಬ ಪ್ಯಾಕೇಜ್ ಆರಂಭಿಸಲಾಗಿತ್ತು. ಜನರಿಂದ ಅದ್ಭುತ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಈ ಬಾರಿಯೂ ಮತ್ತೆ ದಸರಾ ದರ್ಶಿನಿ ವಿಶೇಷ ಪ್ಯಾಕೇಜ್ ಬಸ್ಗಳು ಸಂಚಾರ ನಡೆಸುತ್ತಿದ್ದು, ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಬಾರಿಯ ದಸರಾಗೆ ಮಂಗಳೂರು ಕೆಎಸ್ಆರ್ಟಿಸಿಯಿಂದ ನಾಲ್ಕು ವಿಶೇಷ ಪ್ಯಾಕೇಜ್ಗಳು ಆರಂಭವಾಗಿವೆ. ಒಂದನೇ ಪ್ಯಾಕೇಜ್ನಲ್ಲಿ ದಸರಾ ದರ್ಶಿನಿ ಮೂಲಕ ಮಂಗಳೂರಿನ ಒಂಬತ್ತು ದೇವಿ ದೇಗುಲಗಳ ದರ್ಶನಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪ್ಯಾಕೇಜ್ನಲ್ಲಿ ಮಂಗಳಾದೇವಿ, ಮರೋಳಿ, ಸುಂಕದಕಟ್ಟೆ, ಕಟೀಲು, ಬಪ್ಪನಾಡು, ಸಸಿಹಿತ್ಲು, ಚಿತ್ರಾಪುರ, ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ದೇವಾಲಯಗಳ ದರ್ಶನ ಮಾಡಬಹುದು. ಒಟ್ಟು ಪ್ರಯಾಣ ದರ (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 300 ರೂ. ನಿಗದಿಪಡಿಸಲಾಗಿದೆ.
ಮಂಗಳೂರು - ಕೊಲ್ಲೂರು ಪ್ಯಾಕೇಜ್: ಈ ಪ್ಯಾಕೇಜ್ ಬಸ್ ಮಂಗಳೂರು ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ (ಮಧ್ಯಾಹ್ನದ ಊಟ) ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7 ಗಂಟೆಗೆ ಹಿಂದಿರುಗುತ್ತದೆ. ವಯಸ್ಕರಿಗೆ 500 ರೂ. ಹಾಗೂ ಮಕ್ಕಳಿಗೆ 400 ರೂ. ಟಿಕೆಟ್ ದರವಿದೆ.
ಮಡಿಕೇರಿ ಟೂರ್ ಪ್ಯಾಕೇಜ್: ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಟ ಬಸ್ ಮಡಿಕೇರಿ, ರಾಜಾಸೀಟ್, ಅಬ್ಬಿಫಾಲ್ಸ್, ನಿಸರ್ಗಧಾಮ ಹಾಗೂ ಗೋಲ್ಡನ್ ಟೆಂಪಲ್ ಪ್ರವಾಸ ಕೈಗೊಂಡು ರಾತ್ರಿ 9 ಗಂಟೆಗೆ ಮಂಗಳೂರು ಬಸ್ ನಿಲ್ದಾಣಕ್ಕೆ ಹಿಂದಿಗುತ್ತದೆ. ವಯಸ್ಕರಿಗೆ 500 ರೂ. ಹಾಗೂ ಮಕ್ಕಳಿಗೆ 400 ರೂ. ಪ್ರಯಾಣ ದರ ನಿಗದಿಯಾಗಿದೆ.
ಮಂಗಳೂರು - ಮುರುಡೇಶ್ವರ ಟೂರ್ ಪ್ಯಾಕೇಜ್: ಈ ಬಸ್ ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಮುರುಡೇಶ್ವರ ದೇವಸ್ಥಾನ, ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಶಿ, ಆನೆಗುಡ್ಡೆ ಗಣಪತಿ ದೇವಸ್ಥಾನ ಕುಂಭಾಶಿ ಹಾಗೂ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಪ್ರವಾಸ ಕೈಗೊಂಡು ರಾತ್ರಿ 7ಗಂಟೆಗೆ ಮರಳುತ್ತದೆ. ಟಿಕೆಟ್ ದರ ವಯಸ್ಕರಿಗೆ 550 ರೂ. ಹಾಗೂ ಮಕ್ಕಳಿಗೆ 450 ರೂ. ಇದೆ.
ಶಕ್ತಿ ಯೋಜನೆ ಅನ್ವಯವಾಗಲ್ಲ: ಈ ವಿಶೇಷ ಪ್ಯಾಕೇಜ್ನಲ್ಲಿ ಶಕ್ತಿ ಯೋಜನೆ ಅನ್ವಯವಾಗುವುದಿಲ್ಲ. ಮಹಿಳೆಯರೂ ಸೇರಿ ಎಲ್ಲರೂ ಪೂರ್ಣ ದರ ನೀಡಿಯೇ ಪ್ರಯಾಣಿಸಬೇಕು. ಕೆಎಸ್ಆರ್ಟಿಸಿ ಒಂದೇ ದಿನದಲ್ಲಿ ಹಲವಾರು ದೇಗುಲಗಳ ದರ್ಶನಗಳಿಗೆ ಅವಕಾಶ ನೀಡಿರುವುದು ವಿಶೇಷವೆನಿಸಿದೆ.
ಜನರಿಂದ ಉತ್ತಮ ಪ್ರತಿಕ್ರಿಯೆ: ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, ''ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ಪ್ರಸಿದ್ಧವಾಗುತ್ತಿದೆ. ಸಾರಿಗೆ ಸಂಸ್ಥೆಯಿಂದ ಕೊಡುಗೆ ನೀಡಬೇಕು. ಜನರಿಗೆ ಎಲ್ಲ ದೇವಸ್ಥಾನ ನೋಡುವಂತಾಗಬೇಕು ಎಂದು ಯೋಜನೆ ರೂಪಿಸಿದ್ದೇವೆ. 2022ರಲ್ಲಿ ಒಂದು ಪ್ಯಾಕೇಜ್ ಇತ್ತು. ಈಗ ಜಾಸ್ತಿಯಾಗಿ 4 ಪ್ಯಾಕೇಜ್ ಆಗಿವೆ. ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ'' ಎಂದರು.
''ಕೆಎಸ್ಆರ್ಟಿಸಿ ದಸರಾ ದರ್ಶನ ಎನ್ನುವುದು ಉತ್ತಮ ಪರಿಕಲ್ಪನೆ. ಕಳೆದ ಬಾರಿ ನಾನು ಮಡಿಕೇರಿಗೆ ಹೋಗಿದ್ದೆ. ನಾವಾಗಿಯೇ ಹೋಗುವುದಿದ್ದರೆ ತುಂಬಾ ಹಣ ಖರ್ಚು ಮತ್ತು ಸಮಯ ತಗಲುತ್ತದೆ. 9 ದೇವಸ್ಥಾನಗಳಿಗೆ ಹೋಗುವ ದರವೂ ಕಡಿಮೆ ಇದೆ. ಎಲ್ಲಾ ದೇಗುಲಗಳಿಗೆ ಹೋದ ಖುಷಿಯು ಇರುತ್ತದೆ'' ಎಂದು ಪ್ರಯಾಣಿಕರಾದ ಸಂಧ್ಯಾ ಪೈ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಲ್ಯಾಪ್ ಟಾಪ್, ಹಣವಿದ್ದ ಬ್ಯಾಗ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಬಸ್ ಚಾಲಕ - Driver Returns Lost Bag