ಜಮ್ಮು ಕಾಶ್ಮೀರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮಸೀದಿಯೊಂದರಲ್ಲಿ ಭಾರತಕ್ಕೆ ಬೇಕಾಗಿದ್ದ (ಮೋಸ್ಟ್ ವಾಂಟೆಡ್ ಉಗ್ರ) ಭಯೋತ್ಪಾದಕನೊಬ್ಬನನ್ನು ಶುಕ್ರವಾರ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಿಯಾಜ್ ಅಹ್ಮದ್ ಅಲಿಯಾಸ್ ಅಬು ಖಾಸಿಮ್, ಜನವರಿ 1 ರಂದು ನಡೆದ ಧಾಂಗ್ರಿ ಭಯೋತ್ಪಾದನಾ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ. ನಿಷೇಧಿತ ಸಂಘಟನೆ ಲಷ್ಕರ್-ಎ-ತೋಯ್ಬಾ (ಎಲ್‌ಇಟಿ) ಜೊತೆಗೆ ಸಂಬಂಧ ಹೊಂದಿದ್ದ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಧಂಗ್ರಿ ಗ್ರಾಮದಲ್ಲಿ ಭಯೋತ್ಪಾದಕರು, ಸ್ಥಳೀಯ ನಿವಾಸಿಗಳ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಂದ ಏಳು ಜನರು ಸಾವನ್ನಪ್ಪಿದ್ದರು. 13 ಮಂದಿ ಗಾಯಗೊಂಡಿದ್ದರು. ಮರುದಿನ ಬೆಳಗ್ಗೆ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಭಯೋತ್ಪಾದಕರು ಬಿಟ್ಟುಹೋಗಿದ್ದರು. ಮೂಲತಃ ಜಮ್ಮು ಪ್ರದೇಶದವನಾದ ಅಹ್ಮದ್ 1999ರಲ್ಲಿ ಗಡಿಪಾರು ಮಾಡಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅವಳಿ ಗಡಿ ಜಿಲ್ಲೆಗಳಾದ ಪೂಂಚ್ ಮತ್ತು ರಾಜೌರಿಯಲ್ಲಿ ಭಯೋತ್ಪಾದನೆ ಸಕ್ರಿಯವಾಗಿರುವುದರ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ಎಂದು ಗುರುತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯು ರಜೌರಿ ಜಿಲ್ಲೆಯನ್ನು ಬೆಚ್ಚಿಬೀಳಿಸಿತು. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಧಂಗ್ರಿ ಗ್ರಾಮದಲ್ಲಿ ನಡೆದ ಶಂಕಿತ ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ ನಾಲ್ವರು ನಾಗರಿಕರು ನಾಲ್ವರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಈ ಘಟನೆಯ ಮೊದಲು, ಡಿಸೆಂಬರ್ 16 ರಂದು ಅದೇ ಪ್ರದೇಶದ ಸೇನಾ ಶಿಬಿರದ ಹೊರಗೆ ಇಬ್ಬರು ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ನಂತರ ಡಿಸೆಂಬರ್ 28 ರಂದು, ಜಮ್ಮು ಜಿಲ್ಲೆಯ ಸಿದ್ರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಸೆಪ್ಟೆಂಬರ್ 5ರಂದು ಮಧ್ಯರಾತ್ರಿ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಯತ್ನಸಿದ ಇಬ್ಬರು ಭಯೋತ್ಪಾದಕರನ್ನು ಗಡಿ ಭದ್ರತಾ ರಕ್ಷಣಾ ಪಡೆ ಸಿಬ್ಬಂದಿ ಹೊಡೆದುರಳಿಸಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಸುನಿಲ್ ಬರ್ತ್ವಾಲ್ ಅವರು ಇತ್ತೀಚೆಗೆ ತಿಳಿಸಿದ್ದರು. ಸೆಪ್ಟೆಂಬರ್ 5ರ ಮಧ್ಯರಾತ್ರಿ ಪೂಂಚ್ ಜಿಲ್ಲೆಯ ಮಂಡಿ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ ನುಸುಳುತ್ತಿರುವುದು ಕಂಡು ಬಂದಿತ್ತು. ತಕ್ಷಣವೇ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆ ಜಂಟಿ ಕಾರ್ಯಾಚರಣೆ ನಡೆಸಿದ್ದರು.
ಈ ವೇಳೆ, ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದರು. ಪ್ರತಿಯಾಗಿ ಭದ್ರತಾ ಪಡೆ ಶೆಲ್ ದಾಳಿ ನಡೆಸಿತ್ತು. ಗುರುವಾರ ಬೆಳಗಿನ ಜಾವದವರೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಬೇಡೆಯಾಡಲಾಗಿತ್ತು. ಓರ್ವ ಉಗ್ರನ ಶವವನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿತ್ತು. ಜೊತೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳು ಪತ್ತೆಯಾಗಿದ್ದವು ಎಂದು ಕರ್ನಲ್ ಸುನಿಲ್ ಬರ್ತ್ವಾಲ್ ತಿಳಿಸಿದ್ದರು.
ಇದನ್ನೂ ಓದಿ: ನದಿಯಲ್ಲಿ ದೋಣಿ ಮಗುಚಿ ಅಪಾಯಕ್ಕೆ ಸಿಲುಕಿದ್ದ 7 ಜನರನ್ನ ಕಾಪಾಡಿದ ರಕ್ಷಣಾ ಪಡೆ: ತಮ್ಮನ್ನು ತಾವು ರಕ್ಷಿಸಿಕೊಂಡ ಮೂವರು