ನವದೆಹಲಿ: ಇಸ್ರೇಲ್ ರಾಯಭಾರ ಕಚೇರಿಯ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಸ್ಫೋಟದ ಜವಾಬ್ದಾರಿಯನ್ನು ಜೈಶ್-ಉಲ್-ಹಿಂದ್ ಎಂಬ ಸಂಘಟನೆ ವಹಿಸಿಕೊಂಡಿದೆ ಎಂದು ಟೆಲಿಗ್ರಾಮ್ ಖಾತೆಯಲ್ಲಿ ಸ್ಕ್ರೀನ್ಶಾಟ್ ವೈರಲ್ ಆಗಿದ್ದು, ಆ ಖಾತೆ ಬಗ್ಗೆ ದೆಹಲಿ ಪೊಲೀಸ್ ಅಪರಾಧ ವಿಭಾಗದ ಸೈಬರ್ ಸೆಲ್ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ರಾಯಭಾರ ಕಚೇರಿಯ ಬಳಿ ಸ್ಫೋಟ ಸಂಭವಿಸಿದ ಸ್ಥಳದಿಂದ ಅರ್ಧ ಸುಟ್ಟ ಬಟ್ಟೆ ಮತ್ತು ಪಾಲಿಥಿನ್ ಚೀಲವನ್ನು ವಶಪಡಿಸಿಕೊಳ್ಳಲಾಗಿದ್ದು, ಅಧಿಕೃತ ಏಜೆನ್ಸಿಗಳು ಪರಿಶೀಲಿಸುತ್ತಿವೆ.
ಶುಕ್ರವಾರ ರಾಯಭಾರ ಕಚೇರಿಯ ಬಳಿ ಸಂಭವಿಸಿದ ಕಡಿಮೆ-ತೀವ್ರತೆಯ ಸ್ಫೋಟದಲ್ಲಿ ಬಳಸಿದ ಸ್ಫೋಟಕಗಳ ಗುಣಲಕ್ಷಣಗಳನ್ನು ಪರೀಕ್ಷಿಸಲು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ತಂಡವು ಇಸ್ರೇಲ್ ರಾಯಭಾರ ಕಚೇರಿಯ ಬಳಿ ಭೇಟಿ ನೀಡಿತ್ತು.
ಸ್ಫೋಟ ಸಂಭವಿಸಿದ ಸ್ಥಳದ ಸಮೀಪವಿರುವ ಸಿಸಿಟಿವಿ ದೃಶ್ಯಾವಳಿಗಳ ಆಧರಿಸಿ, ದೆಹಲಿ ಪೊಲೀಸರ ವಿಶೇಷ ಸೆಲ್ ತಂಡವು ಶನಿವಾರ ರಾಯಭಾರ ಕಚೇರಿಯ ಬಳಿ ಇಬ್ಬರನ್ನು ಕರೆತಂದ ಕ್ಯಾಬ್ ಚಾಲಕನನ್ನು ಗುರುತಿಸಿ ವಿಚಾರಣೆ ನಡೆಸುತ್ತಿದೆ.