ಹೈದರಾಬಾದ್ (ತೆಲಂಗಾಣ): ಕೋವಿಡ್ ಲಸಿಕೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪೂರ್ವ ಸಿದ್ಧತಾ ಪರೀಕ್ಷೆ (ಡ್ರೈ ರನ್)ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆ ಮೂರು ರಾಜ್ಯಗಳನ್ನು ಆಯ್ಕೆ ಮಾಡಲಾಗಿದೆ.
ಇದರಲ್ಲಿ ತೆಲಂಗಾಣ, ಹರಿಯಾಣ ರಾಜ್ಯಗಳ ಹೆಸರು ಪರೀಕ್ಷೆಗಳಿಗಾಗಿ ದೃಢವಾದರೆ, ಉತ್ತರ ಪ್ರದೇಶ ಹಾಗೂ ಗುಜರಾತ್ ಎರಡು ರಾಜ್ಯಗಳ ಪೈಕಿ ಒಂದನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ.
ಸಮಗ್ರ ಸಾರ್ವತ್ರಿಕ ವ್ಯಾಕ್ಸಿನೇಷನ್ ಕಾರ್ಯಕ್ರಮ 'ಮಿಷನ್ ರೈನ್ಬೋ', ದಡಾರ-ರುಬೆಲ್ಲಾ (ಎಮ್ಆರ್) ಲಸಿಕೆ, ಪೋಲಿಯೋ ಇಂಜೆಕ್ಷನ್ ಇತ್ಯಾದಿಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ತೆಲಂಗಾಣವಾಗಿದ್ದು, ಇದನ್ನು ಗಣನೆಗೆ ತೆಗೆದುಕೊಂಡು ತೆಲಂಗಾಣವನ್ನು ಪೂರ್ವ ಸಿದ್ಧತೆ ಪರೀಕ್ಷೆ ನಡೆಸಲು ಆಯ್ಕೆ ಮಾಡಲಾಗಿದೆ.
ಕೋವಿಡ್ ಲಸಿಕೆಗಳನ್ನು ರಾಜ್ಯದ ಅತ್ಯಂತ ಶೀತ ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅಲ್ಲಿಂದ ಲಸಿಕೆಗಳನ್ನು ಜಿಲ್ಲಾ ಮಟ್ಟದ ಶೇಖರಣಾ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ ಮತ್ತು ನಂತರ ಲಸಿಕೆ ಹಾಕುವ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತದೆ.
ಈ ಪರೀಕ್ಷೆಯಲ್ಲಿ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು ಮತ್ತು ಕಾರ್ಯವಿಧಾನಗಳನ್ನು ಪ್ರತಿ ಹಂತದಲ್ಲೂ ನೇರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಅತ್ಯಂತ ಸೂಕ್ಷ್ಮ ದೋಷಗಳನ್ನು ಸಹ ಸಂಪೂರ್ಣವಾಗಿ ಗುರುತಿಸಿ ದಾಖಲಿಸಲಾಗುತ್ತದೆ. ಆ ಮೂಲಕ ಯಾವುದೇ ಹಂತದಲ್ಲಿ ಅಗತ್ಯವಿರುವ ಯಾವುದೇ ನಿಯಂತ್ರಣವನ್ನು ಗುರುತಿಸುವುದು ಮತ್ತು ಸರಿಪಡಿಸುವುದು ಸಾಧ್ಯವಾಗಲಿದೆ.
ದೇಶಾದ್ಯಂತ ಸುಮಾರು 30 ಕೋಟಿ ಜನರಿಗೆ ಮೊದಲ ಹಂತದ ಕೋವಿಡ್ ಲಸಿಕೆ ನೀಡಲು ಕೇಂದ್ರ ಸಿದ್ಧತೆ ನಡೆಸಿದೆ.