ತಂಜಾವೂರು(ತಮಿಳುನಾಡು) ದೇಶದಲ್ಲಿ ತಾಪಮಾನ ಏರಿಕೆ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಪದೇ ಪದೆ ಎಚ್ಚರಿಸುತ್ತಿದೆ. ದೇಶದಲ್ಲಿ ಅರಣ್ಯ ನಾಶವಾಗಿ ವಾತಾವರಣದಲ್ಲಿ ಏರುಪೇರು ಉಂಟಾಗಿ ದುಷ್ಪರಿಣಾಮ ಬೀರುತ್ತಿದೆ. ಆದರೆ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಕಿತ್ತೊಗೆದಿದ್ದ 50 ವರ್ಷ ಹಳೆಯದಾದ ಆಲದ ಮರಕ್ಕೆ ಮರುಜೀವ ತುಂಬುವ ಮೂಲಕ ಹಸಿರು ಉಳಿವಿಗಾಗಿ ಶ್ರಮಿಸುತ್ತಿರುವ ಕಾರ್ಯ ಎಲ್ಲರ ಮನಸೆಳೆದಿದೆ.
ಹಸಿರು ಉಳಿಸಲು ಹಾಗೂ ಅರಣ್ಯ ಪ್ರದೇಶ ಅಭಿವೃದ್ಧಿಗಾಗಿ ತಂಜಾವೂರ ಜಿಲ್ಲಾಧಿಕಾರಿ ದಿನೇಶ್ ಪೊನ್ರಾಜ್ ಒಲಿವರ್ ವಿವಿಧ ಕ್ರಮ ಕೈಗೊಳ್ಳುತ್ತಿದ್ದಾರೆ. ಹಸಿರು ಉಳಿಯಬೇಕು ನಾಡು ಬೆಳೆಯಬೇಕು ಎಂಬ ಉದ್ದೇಶದಲ್ಲಿ ಮುನ್ನಡೆದ ಜಿಲ್ಲಾಧಿಕಾರಿಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದು ಜನರಲ್ಲಿ ಹಸಿರಿನ ಮಹತ್ವದ ಅರಿವು ಮೂಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಹಸಿರು ಉಳಿಸಲು ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜತೆಗೆ ತಂಜಾವೂರ ಜಿಲ್ಲಾಧಿಕಾರಿಗಳು ಸೇರಿಕೊಂಡು ಹಸಿರು ಮರಗಳನ್ನು ಬೆಳೆಸಲು ನಿರಂತರ ಶ್ರಮವಹಿಸುತ್ತಿದ್ದಾರೆ.
ಡಿಸಿ ನೇತೃತ್ವದಲ್ಲಿ ತಂಜಾವೂರು ಪಕ್ಕದ ತಿರುಮಲೈಚಮುತ್ರ ಪ್ರದೇಶ ವ್ಯಾಪ್ತಿ ವೃತ್ಶಾ ವನಂ ಯೋಜನೆಯಡಿ ಇಡೀ ಜಿಲ್ಲೆಗೆ ಒಂದು ಮನೆಗೊಂದು ಮರ ಎಂಬ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಲ್ಲದೇ ಕೆರೆ, ಕೊಳಗಳಲ್ಲಿ ಪಕ್ಷಿ ವನ, ನದಿಪಾತ್ರಗಳಲ್ಲಿ ನೈಸರ್ಗಿಕ ವನ, ಕರಾವಳಿಯಲ್ಲಿ ಅಜೀವನ, ಪುರಸಭೆಗಳಲ್ಲಿ ಸಂಪನ್ಮೂಲ ಪುನಶ್ಚೇತನ ವನ, ಗ್ರಾಮಾಂತರ ಪ್ರದೇಶದಲ್ಲಿ ಪಟ್ಟಣಕ್ಕೊಂದು ಅರಣ್ಯ ಹೀಗೆ ಸರಣಿ ಯೋಜನೆ ಜಾರಿಗೆ ತರಲಾಗಿದೆ.
ಇದರ ಬೆನ್ನಲ್ಲೇ ತಂಜಾವೂರು ಸಿಟ್ಕೊ ಆವರಣದಲ್ಲಿ ಉಚಿತ ಸಸಿ ವಿತರಣೆ ಮಾಡಲಾಗುತ್ತಿದೆ . ತಂಜಾವೂರು ಜಿಲ್ಲೆಯ ಅತಿಥಿ ಗೃಹ ಆವರಣದಲ್ಲಿ ಮಾವು, ಹಲಸು ಮತ್ತು ಬಾಳೆ ಸೇರಿದಂತೆ ಮೂರು ಹಣ್ಣಿನ ತೋಟಗಳನ್ನು ನಿರ್ಮಿಸಲಾಗಿದೆ . ತಂಜಾವೂರು ಜಿಲ್ಲೆಯಲ್ಲಿ ರಸ್ತೆ ವಿಸ್ತರಣೆ ವೇಳೆ ಕಡಿದಿರುವ ಮರಗಳಿಗೆ ಜಿಲ್ಲಾ ಹಸಿರು ಸಮಿತಿಯಿಂದ ಒಂದು ಮರದ ಬದಲಿಗೆ 10 ರಿಂದ 20 ಹೆಚ್ಚುವರಿ ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡಲಾಗುತ್ತಿದೆ.
ರಸ್ತೆ ಬಲಿಯಾಗಿದ್ದ ಆಲದ ಮರಕ್ಕೆ ಮರುಜೀವ ತುಂಬಿದ ಡಿಸಿ: ರಸ್ತೆ ಹೆದ್ದಾರಿ ಇಲಾಖೆಯಿಂದ ಇತ್ತೀಚಿನ ದಿನಗಳಲ್ಲಿ ತಂಜಾವೂರು ಹೊಸ ಬಸ್ ನಿಲ್ದಾಣ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಲಿಯಾದ 50 ವರ್ಷ ಹಳೆಯ ಆಲದ ಮರವನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಹೆದ್ದಾರಿ ಇಲಾಖೆಯಿಂದ ಡಿಸಿ ಆವರಣದಲ್ಲಿ ಸ್ಥಳಾಂತರಿಸಲಾಗಿದೆ.
ಇದೀಗ ತಂಜಾವೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 50 ವರ್ಷ ಹಳೆಯ ಆಲದ ಮರವನ್ನು ನೆಟ್ಟಿದ್ದು,.ಜಿಲ್ಲಾಧಿಕಾರಿ ದಿನೇಶ್ ಪೊನ್‌ರಾಜ್ ಆಲಿವರ್ ಮರಕ್ಕೆ ನೀರು ಹಾಕುವ ಮೂಲಕ ಮರಕ್ಕೆ ಜೀವ ತುಂಬಿದ್ದಾರೆ. ಆಲದ ಮರ ಉಳಿಸುವ ಜಿಲ್ಲಾಧಿಕಾರಿ ಕಾರ್ಯಕ್ಕೆ ಕಚೇರಿಯ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ಆಲದ ಮರಕ್ಕೆ ನೀರು ಬಿಡುವ ಸಂದರ್ಭದಲ್ಲಿ ಹೆದ್ದಾರಿ ಇಲಾಖೆಯ ವಿಭಾಗೀಯ ಎಂಜಿನಿಯರ್ ಸೆಂಥಿಲ್‌ಕುಮಾರ್, ಸಹಾಯಕ ವಿಭಾಗೀಯ ಎಂಜಿನಿಯರ್ ಗೀತಾ, ಸಹಾಯಕ ಎಂಜಿನಿಯರ್ ಮೋಹನ, ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಉಪಾಧ್ಯಕ್ಷ ಎಂಜಿನಿಯರ್ ಮುತ್ತುಕುಮಾರ್ ಮತ್ತಿತರರು ಹಾಜರಿದ್ದರು.
ಅದೇ ರೀತಿ ತಂಜಾವೂರಿನ ವಿವೇಕಾನಂದ ನಗರದ 7ನೇ ತರಗತಿಯಲ್ಲಿ ಓದುತ್ತಿರುವ ದಯಾ ಎಂಬ ವಿದ್ಯಾರ್ಥಿನಿಯೂ ತನ್ನ ತಾರಸಿ ತೋಟದಲ್ಲಿ ಚಿಗುರೊಡೆದ ಆಲದ ಮರವನ್ನು ತಂದು ಜಿಲ್ಲಾಧಿಕಾರಿ ದಿನೇಶ್ ಪೊನ್‌ರಾಜ್ ಆಲಿವರ್ ಅವರಿಗೆ ಹಸ್ತಾಂತರಿಸಿದ್ದಾರೆ. ನಂತರ ಅದನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಸಿ ನೆಡಲಾಯಿತು.
ನಿತ್ಯ ವಿವಿಧ ಕೆಲಸಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬರುವ ಬಹು ಸಂಖ್ಯೆಯ ಜನರು ಹಸಿರಿನಿಂದ ಕಂಗೊಳಿಸುತ್ತಿರುವ ಡಿಸಿ ಕಚೇರಿ ಆವರಣ ನೋಡಿ ಸಂತಸ ಪಡುತ್ತಿದ್ದಾರೆ. ಬಿಸಿಲಿನ ತಾಪ ತಡೆಯಲು ಆವರಣದ ಮರಗಳ ನೆರಳಿನ ಮೊರೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈಗಾಗಲೇ ತಂಜಾವೂರು ಜಿಲ್ಲಾಧಿಕಾರಿಗಳ ಕಚೇರಿ ಆವರಣ ವಿವಿಧ ಜಾತಿಯ ಮರಗಳಿಂದ ತುಂಬಿ ತುಳುಕುತ್ತಿದ್ದು, ಜಿಲ್ಲಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂಓದಿ:ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಸಂಜೀವಿನಿಯಾದ ಭಾರತೀಯ ಸೇನೆ