ಚೆನ್ನೈ: ತಮಿಳುನಾಡಿನ ರಾಜಧಾನಿ ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿದೆ ಎಂದು ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೆಕೆಎಸ್‌ಎಸ್‌ಆರ್ ರಾಮಚಂದ್ರನ್ ಬುಧವಾರ ಮಾಹಿತಿ ನೀಡಿದ್ದಾರೆ.
ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಸಂಪೂರ್ಣ ನೀರಿನಿಂದ ಜಲಾವೃತವಾಗಿವೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 2015 ರ ಬಳಿಕ ಚೆನ್ನೈನಲ್ಲಿ ಕಂಡ ಮಹಾ ಮಳೆ ಎಂದು ಹವಾಮಾನ ಸಂಸ್ಥೆಗಳು ಹೇಳಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
2015ರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆನಂತರ ಇದೇ ಮೊದಲ ಬಾರಿಗೆ ಇಷ್ಟು ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು, ಭಾರಿ ಸಮಸ್ಯೆ ಉದ್ಭವವಾಗಿದೆ.
ಇದನ್ನೂ ಓದಿ: ವರುಣನ ರೌದ್ರಾವತಾರ: ಆರು ವರ್ಷದ ಬಳಿಕ ಮಹಾ ಮಳೆಗೆ ನಲುಗಿದ ಚೆನ್ನೈ, ರೆಡ್ ಅಲರ್ಟ್ ಘೋಷಣೆ
ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ.
ನಿನ್ನೆ ಭಾರತೀಯ ಹವಾಮಾನ ಇಲಾಖೆ (IMD) ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿತ್ತು. ಚೆನ್ನೈ, ತಿರುವಳ್ಳೂರು, ಕಲ್ಲಕುರಿಚಿ, ಸೇಲಂ, ವೆಲ್ಲೂರು, ತಿರುಪತ್ತೂರು, ರಾಣಿಪೇಟ್, ತಿರುವಣ್ಣಾಮಲೈ ಮತ್ತು ಪುದುಚೇರಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ಮುಂದುವರೆದಿದೆ.