ತಿರುನಲ್ವೇಲಿ (ತಮಿಳುನಾಡು): ಪಜಗೂರು ಗ್ರಾಮದಲ್ಲಿ ಧಾರ್ಮಿಕ ಉತ್ಸವ ನಡೆಯುತ್ತಿದ್ದ ವೇಳೆ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಈ ವೇಳೆ ವ್ಯಕ್ತಿಯೋರ್ವ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಪಜವೂರಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಮಾರ್ಗರೇಟ್ ಥೆರೇಸಾ ಗಾಯಗೊಂಡಿದ್ದಾರೆ.
![Youth stabbed woman SI on duty in Tirunelvei](https://etvbharatimages.akamaized.net/etvbharat/prod-images/15094762_twdfddfdf.jpg)
ಮಾರ್ಗರೇಟ್ ಥೆರೇಸಾ ಅವರ ಕುತ್ತಿಗೆಯ ಭಾಗಕ್ಕೆ ಆರೋಪಿ ಆರುಮುಗಂ ಚಾಕುವಿನಿಂದ ಇರಿದಿದ್ದು, ತಕ್ಷಣ ತೀವ್ರವಾಗಿ ಗಾಯಗೊಂಡು ಅವರು ನೆಲಕ್ಕೆ ಬಿದ್ದಿದ್ದರು. ಕೂಡಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಹಳೇ ದ್ವೇಷದ ಕಾರಣ ಈ ಕೃತ್ಯವೆಸಗಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.
ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ವೇಳೆ ಆತನ ಬಂಧನ ಮಾಡಲಾಗಿತ್ತು. ಈ ವೇಳೆ ಎಸ್ಐ ಮಾರ್ಗರೇಟ್ ಈತನ ಮೇಲೆ ಪ್ರಕರಣ ದಾಖಲು ಮಾಡಿದ್ದರು. ಇದೇ ಕೋಪದಲ್ಲಿ ಇದೀಗ ಕೃತ್ಯವೆಸಗಿದ್ದಾನೆ. ಗಾಯಗೊಂಡಿರುವ ಎಸ್ಐ ಅವರನ್ನು ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಮಾರ್ಗರೇಟ್ ಅವರಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡುವಂತೆ ಆದೇಶ ನೀಡಿದ್ದಾರೆ.