ಹಿಸ್ಸಾರ್(ಹರಿಯಾಣ): ಸೂರ್ಯನ ಪ್ರತಾಪಕ್ಕೆ ಭೂಮಿ ಕಾದ ಬಾಣಲೆಯಂತಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ಸಲ ತುಸು ಹೆಚ್ಚೇ ಬಿಸಿಲಿದೆ. ಹೀಗಾಗಿ ಜನರು ಮಾತ್ರವಲ್ಲ, ಪ್ರಾಣಿ-ಪಕ್ಷಿಗಳೂ ಕೂಡಾ ದಾಹ ತೀರಿಸಿಕೊಳ್ಳಲು ನೀರಿನ ಮೊರೆ ಹೋಗುತ್ತಿವೆ. ಹರಿಯಾಣದ ಹಿಸ್ಸಾರ್ನಲ್ಲಿ ಜಾನುವಾರುಗಳ ರಕ್ಷಣೆಗೋಸ್ಕರ ಸೆಂಟ್ರಲ್ ಬಫಲೋ ರಿಸರ್ಚ್ ಇನ್ಸ್ಟಿಟ್ಯೂಟ್ ಈಜುಕೊಳ ನಿರ್ಮಿಸಿದೆ.
ಈ ಈಜುಕೊಳದಲ್ಲಿ ಎಮ್ಮೆಗಳಿಗೆ ಪ್ರತಿದಿನ ಮೂರ್ನಾಲ್ಕು ಸಲ ಸ್ನಾನ ಮಾಡಿಸಲಾಗ್ತಿದೆ. ಇದಕ್ಕಾಗಿ ಈಜುಕೊಳದ ಸುತ್ತಲೂ ಕಾರಂಜಿ ನಿರ್ಮಾಣ ಮಾಡಲಾಗಿದ್ದು, ಬಿಸಿಲಿನಿಂದ ಕಂಗೆಟ್ಟ ಎಮ್ಮೆಗಳಿಗೆ ಗಂಟೆಗಟ್ಟಲೆ ಇದರಲ್ಲಿ ಅಭ್ಯಂಜನ ನಡೆಯುತ್ತದೆ. ಹರಿಯಾಣದಲ್ಲಿ ಹಾಲು ಉತ್ಪಾದನೆಗೋಸ್ಕರ ಹೆಚ್ಚಿನ ಪ್ರಮಾಣದಲ್ಲಿ ಎಮ್ಮೆ ಸಾಕಾಣಿಕೆ ಮಾಡಲಾಗುತ್ತದೆ. ಬಿಸಿಲ ತಾಪಕ್ಕೆ ಹಾಲಿನ ಉತ್ಪಾದನೆಯಲ್ಲಿ ಕೊರತೆಯಾಗುತ್ತದೆ. ಹೀಗಾಗಿ ಈಜುಕೊಳ ಸಿದ್ಧಪಡಿಸಲಾಗಿದೆ.
ಇದನ್ನೂ ಓದಿ: ಗೆಳತಿಯನ್ನ ಮನೆಗೆ ಕರೆದ.. ತಂಪು ಪಾನೀಯದಲ್ಲಿ ಮತ್ತೇರುವ ಔಷಧಿ ಕಲಿಸಿದ.. ನಗ್ನಗೊಳಿಸಿ_____
ಕೇಂದ್ರೀಯ ಬಫೆಲೋ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಅನುರಾಗ್ ಭಾರದ್ವಾಜ್ ಪ್ರತಿಕ್ರಿಯಿಸಿ,'ಸೂರ್ಯನ ಶಾಖದಿಂದ ಒತ್ತಡಕ್ಕೊಳಗಾಗುವ ಎಮ್ಮೆಗಳು ಅನೇಕ ರೀತಿಯ ಸಮಸ್ಯೆಗೊಳಗಾಗುತ್ತವೆ. ಹೀಗಾಗಿ ಹಾಲು ನೀಡುವ ಸಾಮರ್ಥ್ಯವೂ ಕಡಿಮೆಯಾಗ್ತದೆ. ಇದರಿಂದ ರಕ್ಷಣೆ ಮಾಡಲು ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಲಾಗಿದೆ' ಎಂದರು.
ಇಲ್ಲಿನ ಪ್ರಾಣಿಗಳಿಗೆ ತಿನ್ನಲು ಗಂಜಿ, ಸಾಸಿವೆ ರೊಟ್ಟಿ ಸೇರಿದಂತೆ ಪ್ರಮುಖ ಪೌಷ್ಟಿಕಾಂಶಗಳನ್ನು ನೀಡಲಾಗುತ್ತಿದೆ. ಜೊತೆಗೆ, ಅವುಗಳ ದೇಹದಲ್ಲಿ ನೀರಿನ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಹೆಚ್ಚಿನ ಹಸಿರು ಮೇವು ಹಾಕುತ್ತೇವೆ ಎಂದು ಅವರು ವಿವರಿಸಿದರು.