ಬೊಕಾರೊ (ಜಾರ್ಖಂಡ್) : ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನವಾಡಿಹ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ.
ನವಾಡಿಹ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋಬರ್ಗಡ್ಡಾ ನಿವಾಸಿ ಬಿಸಿಸಿಎಲ್ ಉದ್ಯೋಗಿ ಶುಕರ್ ಧೋಬಿ, ಆತನ ಎರಡನೇ ಪತ್ನಿ ಗೌರಿ ದೇವಿ ಮತ್ತು 14 ವರ್ಷದ ಮಗ ಅಭಿಷೇಕ್ ಕುಮಾರ್ ಮೃತರು.
ಬುಧವಾರ ರಾತ್ರಿ ಇಡೀ ಕುಟುಂಬ ಊಟ ಮುಗಿಸಿ ಕೋಣೆಯಲ್ಲಿ ಮಲಗಿದ್ದರು. ಇಂದು ಬೆಳಗ್ಗೆ ಹಾಲು ಹಾಕುವ ಯುವಕ ಮನೆಗೆ ಬಂದು ಬಾಗಿಲು ತಟ್ಟಿದರೂ ಯಾರೂ ಉತ್ತರಿಸಲಿಲ್ಲ. ನಂತರ ಶುಕರ್ ಧೋಬಿ ಅವರ ಮೊದಲ ಪತ್ನಿಯ ಮಗ ರಾಜು ಧೋಬಿ ಅವರಿಗೆ ಮಾಹಿತಿ ನೀಡಲಾಯಿತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಾಜು ಧೋಬಿ, ಮನೆಯ ಬಾಗಿಲು ಮುರಿದು ಒಳಗೆ ಹೋದಾಗ ಕುಟುಂಬದ ಮೂವರೂ ಶವವಾಗಿ ಪತ್ತೆಯಾಗಿದ್ದಾರೆ. ಅಭಿಷೇಕ್ನ ಬಾಯಿಂದ ನೊರೆ ಬರುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಹಾರದಲ್ಲಿ ವಿಷ ಸೇರಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಮೂವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.