ನವದೆಹಲಿ: ಬಹುಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಗುರುವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಅವರಿಗೆ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಸತ್ಯೇಂದರ್ ಜೈನ್ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಕೇಶ್ ಪ್ರಸ್ತುತ ಮಂಡಲಿ ಜೈಲಿನಲ್ಲಿದ್ದು, ಅನೇಕ ಆಮ್ ಆದ್ಮಿ ಪಕ್ಷದ ನಾಯಕರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿ ಮೂರು ಸುದೀರ್ಘ ಪುಟಗಳ ದೂರು ಸಲ್ಲಿಸಿದ್ದಾರೆ.
ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದರ್ ಜೈನ್, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಮ್ ಆದ್ಮಿ ಪಕ್ಷದ ಟಿಕೆಟ್ ನೀಡುವ ಆಮಿಷ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನು ಆಮ್ ಆದ್ಮಿ ಪಕ್ಷನ ಅನೇಕ ನಾಯಕರು ಮತ್ತು ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಕೊಟ್ಟಿರುವ ದೂರುಗಳನ್ನು ಹಿಂಪಡೆಯುವಂತೆ ಷರತ್ತು ವಿಧಿಸಿ ಒತ್ತಾಯ ಹೇರುತ್ತಿದ್ದಾರೆ. ಅಲ್ಲದೇ ಅವರು ಪಂಜಾಬ್ನಲ್ಲಿ ಗಣಿಗಳ ಗುತ್ತಿಗೆಯನ್ನು ನೀಡುವ ಭರವಸೆಯನ್ನು ನೀಡುತ್ತಿದ್ದಾರೆ. ತಮ್ಮ ಈ ಆಫರ್ಗಳನ್ನು ಒಪ್ಪಿಕೊಳ್ಳದಿದ್ದರೆ, ಗಂಭೀರ ಪರಿಣಾಮವನ್ನು ಎದುರಿಸುವ ಎಚ್ಚರಿಕೆಯನ್ನು ಜೈನ್ ನೀಡಿದ್ದಾರೆ ಎಂದು ದೂರಿದ್ದಾರೆ.
ಈಗಾಗಲೇ ಅನೇಕ ಪತ್ರ ಬರೆದಿರುವ ವಂಚಕ: ಈ ಹಿಂದೆ ಕೂಡ ಜೈಲಿನಲ್ಲಿ ತಮಗೆ ಎಎಪಿ ನಾಯಕರು ದೂರು ಹಿಂಪಡೆಯುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ, ಜೈಲಿನಲ್ಲಿ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದು, ತಮ್ಮನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿ ಸುಕೇಶ್ ದೆಹಲಿ ಲೆಫ್ಟಿನೆಂಟ್ ಗವರ್ನರ್ಗೆ ಪತ್ರ ಬರೆದಿದ್ದರು. ಮತ್ತೊಂದು ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಜೈನ್ ಅವರ ಕುರಿತು ವೈಯಕ್ತಿಕ ಮಾಹಿತಿ ತಮ್ಮ ಬಳಿ ಇವೆ. ಅವರು ಪಂಜಾಬ್ ಚುನಾವಣೆಗೆ ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕೂಡ ಆರೋಪಿಸಿದ್ದರು.
ತನಿಖೆಗೆ ತ್ರಿಸದಸ್ಯ ಸಮಿತಿ: ನಿರಂತರ ಆರೋಪದ ಹಿನ್ನೆಲೆಯಲ್ಲಿ ಸುಕೇಶ್ ಅವರ ಆರೋಪದ ಕುರಿತು ತನಿಖೆ ನಡೆಸಲು ಲೆಫ್ಟಿನೆಂಟ್ ಗವರ್ನರ್ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತ್ರಿ ಸದಸ್ಯ ಸಮಿತಿ ರಚಿಸಿದ್ದರು. ಈ ಸಮಿತಿ ಸುಕೇಶ್ ಅವರ ಹೇಳಿಕೆಯನ್ನು ಕೂಡ ದಾಖಲಿಸಿಕೊಂಡಿತ್ತು. ಈ ವೇಳೆ ಅವರು ದಕ್ಷಿಣ ಭಾರತದಲ್ಲಿ ಪಕ್ಷದ ಪ್ರಾಬಲ್ಯ ಬೆಳೆಸಲು ಸಹಾಯ ಮಾಡಿದರೆ ರಾಜ್ಯಸಭೆಗೆ ಕಳುಹಿಸುವ ಭರವಸೆ ನೀಡಿದ್ದರು ಎಂದು ತಿಳಿಸಿದ್ದರು. ಈ ಮಾಹಿತಿ ಕುರಿತು ತ್ರಿ ಸದಸ್ಯ ಪೀಠ ದೆಹಲಿ ಲೆಫ್ಟಿನೆಂಟ್ ಗವರ್ನರ್ಗೆ ವರದಿಯನ್ನು ಸಲ್ಲಿಸಿತ್ತು.
ಯಾರು ಸುಕೇಶ್ ಚಂದ್ರಶೇಖರ್?: ಬೆಂಗಳೂರು ಮೂಲದ 30 ವರ್ಷದ ಸುಕೇಶ್ ಚಂದ್ರಶೇಖರ್ ವಿರುದ್ಧ ಅನೇಕ ಮೆಟ್ರೋ ನಗರಗಳಲ್ಲಿ ವಂಚನೆ ಪ್ರಕರಣಗಳಿವೆ. 200 ಕೋಟಿ ಸುಲಿಗೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಆರ್ಥಿಕ ಅಪರಾಧ ದಳ ಅವರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಹೈ ಪ್ರೋಫೈಲ್ ಜನರಿಗೆ ವಂಚನೆ ಮಾಡಿರುವ ಅನೇಕ ಪ್ರಕರಣಗಳು ಈತನ ಮೇಲಿದೆ. 2021ರಲ್ಲಿ ಇಡಿ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಚೆನ್ನೈನ ಐಷಾರಾಮಿ ಬಂಗಲೆ ಮೇಲೆ ದಾಳಿ ಮಾಡಿದಾಗ 82.5 ಲಕ್ಷ ನಗದು 12ಕ್ಕೂ ಹೆಚ್ಚು ಐಷಾರಾಮಿ ಕಾರನ್ನು ವಶಕ್ಕೆ ಪಡೆದಿತ್ತು. ಸುಲಿಗ ಹಣದಲ್ಲಿ ಅವರು ಬಾಲಿವುಡ್ ನಟಿಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಅವರಿಗಾಗಿ ಹಣ ಖರ್ಚು ಮಾಡುತ್ತಿದ್ದರು ಎಂಬ ಆರೋಪ ಕೂಡ ಇದೆ.
ಇದನ್ನೂ ಓದಿ: ನವದೆಹಲಿಯ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ