ಮುಂಗೇಲಿ (ಛತ್ತೀಸ್‌ಗಢ): ನವಜಾತ ಶಿಶುವೊಂದನ್ನು ತಾಯಿಯೊಬ್ಬಳು ಕೊರೆಯುವ ಚಳಿಯಲ್ಲಿ ಬರಿ ಮೈಯಲ್ಲಿಯೇ ಬಿಟ್ಟು ಹೋದ ಘಟನೆ ಛತ್ತೀಸ್ಗಢದ ಮುಂಗೇಲಿ ಜಿಲ್ಲೆಯ ಸರಿಸ್ಟಾಲ್ ಗ್ರಾಮದಲ್ಲಿ ಜರುಗಿದೆ. ಆಚ್ಚರಿ ಎಂಬಂತೆ ತಾಯಿಗೆ ಇಷ್ಟವಾಗದೇ ಬಿಟ್ಟು ಹೋದ ಮಗುವನ್ನು ಬೀದಿ ನಾಯಿಗಳು ರಾತ್ರಿಯಿಡಿ ರಕ್ಷಣೆ ಮಾಡಿವೆ.
ಹೌದು, ಜೀವ ನೀಡುವ ತಾಯಿಯು ಪ್ರೀತಿ ಮತ್ತು ಸಹಾನುಭೂತಿಯ ಪ್ರತಿರೂಪವೆಂದು ಪೂಜಿಸಲಾಗುತ್ತದೆ. ಆದರೆ ಕೆಲವು ಮಹಿಳೆಯರು ನವಜಾತ ಶಿಶುಗಳನ್ನು ತೊರೆದು ಹೆಣ್ತನಕ್ಕೆ ಕಳಂಕ ತರುತ್ತಿದ್ದಾರೆ. ಸರಿಸ್ಟಾಲ್ ಗ್ರಾಮದಲ್ಲಿ ಶ್ವಾನವೊಂದು ತನ್ನ ಮರಿಗಳ ನಡುವೆ ಹಸುಗೂಸನ್ನ ರಕ್ಷಿಸಿ ಮೃಗದ ಮನಸ್ಥಿತಿ ಹೊಂದಿರುವ ಕೆಲವರಿಗೆ ಮನುಷ್ಯತ್ವದ ಪಾಠ ಮಾಡಿದೆ.
ನಾಯಿ ಮತ್ತು ಅದರ ನಾಲ್ಕು ನಾಯಿಮರಿಗಳ ನಡುವೆ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಕೂಡಲೇ ಲೋರ್ಮಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಎಸ್‌ಐ ಚಿಂತಾರಾಮ್ ತಂಡ ಮಗುವನ್ನು ರಕ್ಷಿಸಿ, ಪರೀಕ್ಷೆ ನಡೆಸಿ ಮುಂಗೇಲಿಗೆ ಕರೆದೊಯ್ದರು.
ಸದ್ಯ ಮಕ್ಕಳ ಕಲ್ಯಾಣ ಸಮಿತಿ ನಡೆಸುತ್ತಿರುವ ಚೈಲ್ಡ್ ಲೈನ್ ಯೋಜನೆಯು ಬಾಲಕಿಗೆ ಆಕಾಂಕ್ಷ ಎಂದು ಹೆಸರಿಟ್ಟಿದೆ. ಇದೀಗ ಮಗು ಎಲ್ಲಿ ವಾಸಿಸುತ್ತದೆ ಎಂಬುದನ್ನು ಸಮಿತಿ ನಿರ್ಧರಿಸಲಿದೆ. ತೀವ್ರ ಚಳಿಯ ನಡುವೆಯೂ ಕರುಳ ಬಳ್ಳಿಯನ್ನು ತೊರೆದು ಹೋದ ಮಹಾತಾಯಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಸ್ಥಳೀಯ ಸರಪಂಚ್ ಮುನ್ನಾಲಾಲ್ ಪಟೇಲ್ ಮಾತನಾಡಿ, ನಾವು ಕೆಲಸದ ನಿಮಿತ್ತ ಹೊರಗೆ ಬಂದಿದ್ದೆವು. ಬೆಳಗ್ಗೆ 11 ಗಂಟೆಗೆ ಗ್ರಾಮದಲ್ಲಿ ನಾಯಿಗಳ ಮಧ್ಯೆ ನವಜಾತ ಹೆಣ್ಣು ಮಗು ಇದ್ದದ್ದನ್ನು ಕಂಡು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದೆವು. ಬಳಿಕ ನವಜಾತ ಶಿಶುವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು ಎಂದು ತಿಳಿಸಿದರು.