ಕಿನ್ನೌರ್ (ಹಿಮಾಚಲ ಪ್ರದೇಶ): ದೇಶದ ಸ್ವಾತಂತ್ರ್ಯಕ್ಕೆ ದೊರೆತ ನಾಲ್ಕು ವರ್ಷಗಳ ನಂತರ ಎಂದರೆ 1951ರ ಅಕ್ಟೋಬರ್ 25ರಂದು ಇಡೀ ರಾಷ್ಟ್ರವೇ ಹೊಸ ಇತಿಹಾಸ ಬರೆಯಲು ಸಜ್ಜಾಗಿತ್ತು. ಅಂದು ಸ್ವಾತಂತ್ರ್ಯ ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆ ನಿಗದಿಯಾಗಿತ್ತು. ಹಿಮಾಚಲ ಪ್ರದೇಶದ ಒಂದು ಸಣ್ಣ ಹಳ್ಳಿಯ ಶಿಕ್ಷಕ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ್ದರು. ಈಗ ಆ ವ್ಯಕ್ತಿಗೆ 105 ವರ್ಷಗಳಾಗಿದ್ದು, ಇವತ್ತು ಕೂಡ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.
ಹೌದು, ದೇಶದ ಮೊದಲ ಮತದಾರ ಎಂದೇ ಖ್ಯಾತಿಯಾದ ಮಾಸ್ಟರ್ ಶ್ಯಾಮ್ ಸರಣ್ ನೇಗಿ 105ನೇ ವಯಸ್ಸಿನಲ್ಲೂ ಇಂದು ಕಿನ್ನೌರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದರು. ಅಧಿಕೃತ ದಾಖಲೆಯ ಪ್ರಕಾರ ಸರಣ್ ನೇಗಿ 1951-52ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾಗವಹಿಸಿದ ಇದು ದೇಶದ ಮೊದಲ ಮತದಾರ ಎಂದೇ ಹೆಸರು ವಾಸಿಯಾಗಿದ್ದಾರೆ.
ಇಂದು ಮತದಾನದ ಬಳಿಕ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ನಾನು ಮತ ಚಲಾಯಿಸುವ ಅವಕಾಶವನ್ನು ನಾನು ಎಂದಿಗೂ ಕಳೆದುಕೊಂಡಿಲ್ಲ. ಈ ಬಾರಿಯೂ ಮತದಾನ ಮಾಡಲು ನನಗೆ ಸಂತೋಷವಾಗಿದೆ ಎಂದು ಹೇಳಿದರು. ಅಲ್ಲದೇ, ಪ್ರತಿಯೊಬ್ಬ ಮತದಾರರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಮನೆಯಲ್ಲಿ ನೇಗಿ ಮತ ಚಲಾವಣೆ: ಈ ಹಿಂದಿನ ಚುನಾವಣೆಗಳ ಸಂದರ್ಭಗಳಲ್ಲಿ ಸರಣ್ ನೇಗಿ ಮತ ಚಲಾಯಿಸಲು ಹತ್ತಿರದ ಮತಗಟ್ಟೆಗೆ ಹೋಗುತ್ತಿದ್ದರು. ಆದರೆ, ಈ ಬಾರಿ 80 ವರ್ಷ ಮೇಲ್ಪಟ್ಟವರು ತಮ್ಮ ವಾಸಸ್ಥಳದಲ್ಲೇ ಮತ ಚಲಾಯಿಸಲು ಚುನಾವಣಾ ಆಯೋಗವು ವಿಶೇಷ ಅವಕಾಶ ಮಾಡಿಕೊಟ್ಟಿದೆ.
ನವೆಂಬರ್ 12ರಂದು ಹಿಮಾಚಲ ಪ್ರದೇಶದ ವಿಧಾನಸಭೆಗೆ ಚುನಾವಣೆ ನಿಗದಿಯಾಗಿದೆ. ಈ ಹಿಂದೆ ಮೊದಲು ಮತದಾನದ ದಿನದಂದು ಮತ ಚಲಾಯಿಸಲು ನಿರ್ಧರಿಸಿದ್ದರು. ಆದರೆ, 80 ವರ್ಷ ಮೇಲ್ಪಟ್ಟವರಿಗೆ ಆಯೋಗ ವಿಶೇಷ ಅವಕಾಶ ನೀಡಿದ್ದರಿಂದ ಮನೆಯಲ್ಲಿ ಅವರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿತ್ತು ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚುನಾವಣಾ ಕರ್ತವ್ಯ ನಿರ್ವಹಿಸಿದ್ದ ಶಿಕ್ಷಕ: ಶತಾಯುಷಿಯಾದ ಸರಣ್ ನೇಗಿ ಲೋಕಸಭೆ, ವಿಧಾನಸಭೆ ಅಥವಾ ಪಂಚಾಯತ್ ಯಾವುದೇ ಚುನಾವಣೆಗಳಲ್ಲಿ ಮತ ಚಲಾಯಿಸಲು ಎಂದಿಗೂ ಮರೆತಿಲ್ಲ. 1951ರಲ್ಲಿ ಶಿಕ್ಷಕರಾಗಿದ್ದ ಸರಣ್ ನೇಗಿ ಚುನಾವಣಾ ಕರ್ತವ್ಯವನ್ನೂ ನಿರ್ವಹಿಸಿದ್ದರು.
ಆಗ 1952ರಲ್ಲಿ ಲೋಕಸಭೆ ಚುನಾವಣೆಗೆ ನಿಗದಿಯಾಗಿತ್ತು. ಆದರೆ, ಹಿಮಾಚಲ ಪ್ರದೇಶದಲ್ಲಿ ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಹಿಮಪಾತ ಮತ್ತು ತೀವ್ರ ಚಳಿ ಇರುತ್ತದೆ ಎಂಬ ಕಾರಣಕ್ಕೆ ಜನರಿಂದ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ, ಚಳಿಯ ವಾತಾವರಣದಲ್ಲಿ ಯಾರೂ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣದಿಂದ ದೇಶದ ಇತರ ಭಾಗಗಳಿಂತ ಮುಂಚಿತವಾಗಿಯೇ 1951ರ ಅಕ್ಟೋಬರ್ನಲ್ಲಿ ಮತದಾನ ಮಾಡಿಸಲಾಗಿತ್ತು. ಅಂದು ಮೊದಲ ಮತದಾನ ಮಾಡಿದ್ದ ಶ್ಯಾಮ್ ಸರನ್ ನೇಗಿ ಈಗ ವಿವಿಐಪಿ ಮತದಾರರಾಗಿದ್ದಾರೆ.
ಇದನ್ನೂ ಓದಿ: 1951ರಿಂದ ಯಾವುದೇ ಚುನಾವಣೆಯನ್ನೂ ಮಿಸ್ ಮಾಡಿಲ್ಲ... ಶಿಮ್ಲಾದಲ್ಲೊಬ್ಬ ಹಿರಿಯ ಮತದಾರ..!