ಪೌರಿ ಗರ್ವಾಲ್ (ಉತ್ತರಾಖಂಡ): ಇವರು ವೃತ್ತಿಯಲ್ಲಿ ಪ್ರೊಫೆಸರ್. ಆದರೆ, ಪ್ರವೃತ್ತಿ ಮಾತ್ರ ಮೊಬೈಲ್ ಕಳ್ಳತನ. ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ಶ್ರೀನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಈವರೆಗೆ ಬರೋಬ್ಬರಿ 30 ಮೊಬೈಲ್ಗಳನ್ನ ಕದ್ದಿದ್ದಾರೆ.
ಡಿಸೆಂಬರ್ 15ರಂದು ವೈದ್ಯಕೀಯ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ವಿದ್ಯಾರ್ಥಿಗಳ ಮೊಬೈಲ್ ಫೋನ್ಗಳನ್ನು ಕೊಠಡಿ ನಿರೀಕ್ಷಕರು ಪಡೆದಿದ್ದಾರೆ. ಆದರೆ, ಪರೀಕ್ಷೆ ಮುಗಿದ ಮೇಲೆ ಒಬ್ಬ ವಿದ್ಯಾರ್ಥಿಯ ಫೋನ್ ಮಾತ್ರ ಸಿಕ್ಕಿರಲಿಲ್ಲ.
ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅದೇ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮೊಬೈಲ್ ಕದ್ದಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಸಿಖ್ಖರ ಧ್ವಜ ನಿಶಾನ್ ಸಾಹಿಬ್ಗೆ ಅಗೌರವ ಆರೋಪ ; ಪಂಜಾಬ್ನಲ್ಲಿ ಮತ್ತೊಬ್ಬ ವ್ಯಕ್ತಿ ಹತ್ಯೆ
ವಿಡಿಯೋ ಕಂಡ ಇತರ ಪ್ರಾಧ್ಯಾಪಕರು, ಕಾಲೇಜು ಪ್ರಾಂಶುಪಾಲರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಎಲ್ಲರೂ ಸೇರಿ ಆ ಪ್ರಾಧ್ಯಾಪಕನ ಕೊಠಡಿಗೆ ಹೋಗಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ನೀವು ಮೊಬೈಲ್ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ ಎಂದರೂ, ಆ ಪ್ರಾಧ್ಯಾಪಕ ಮಾತ್ರ ಒಪ್ಪಿರಲಿಲ್ಲ.
ಹೀಗಾಗಿ, ಪ್ರಾಧ್ಯಾಪಕನ ಮನೆಗೇ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಈ ವೇಳೆ ಒಂದಲ್ಲ 30 ಮೊಬೈಲ್ಗಳು ಸಿಕ್ಕಿವೆ. ಸದ್ಯ ಈ ಬಗ್ಗೆ ತನಿಖೆ ನಡೆಸಲು ಕಾಲೇಜು ಆಡಳಿತವು ಸಮಿತಿಯೊಂದನ್ನು ರಚಿಸಿದೆ.