ಗಂಗಾವತಿ (ಕೊಪ್ಪಳ): "ಝಿರೋ ಟ್ರಾಫಿಕ್ ಇದ್ದಾಗಲೂ ಶಿಷ್ಟಾಚಾರ ಮುರಿದು ರೋಡ್ ಡಿವೈಡರ್ ಹತ್ತಿಸಿ ಮುಖ್ಯಮಂತ್ರಿಗಳ ಭದ್ರತೆ, ಸುರಕ್ಷತೆಯ ಬೆಂಗಾವಲು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಮಂತ್ರಿ, ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಸಂಚರಿಸುವ ಮಾರ್ಗದಲ್ಲಿ Z-ಶ್ರೇಣಿಯ ಭದ್ರತೆಯ ಉದ್ದೇಶಕ್ಕೆ ಝಿರೋ ಟ್ರಾಫಿಕ್ ಮಾಡಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗುತ್ತದೆ. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಗಾವತಿ ಮೂಲಕ ಕೊಪ್ಪಳಕ್ಕೆ ಹೋಗುವ ಸಂದರ್ಭದಲ್ಲಿ ಝಿರೋ ಟ್ರಾಫಿಕ್ ಮಾಡಲಾಗಿತ್ತು. ಆಗ ನಿಯಮ ಉಲ್ಲಂಘಿಸಿ ಶಾಸಕ ಜನಾರ್ದನರೆಡ್ಡಿ, ರೋಡ್ ಡಿವೈಡರ್ ಹತ್ತಿಸಿ ರಾಂಗ್ ರೂಟ್ನಲ್ಲಿ ಬೆಂಗಾವಲು ವಾಹನಕ್ಕೆ ಎದುರು ಬಂದಿರುವುದು ಕಾನೂನು ಬಾಹಿರ" ಎಂದು ಹೇಳಿದರು.
"ಪೊಲೀಸರು ತಡೆದು ನಿಲ್ಲಿಸಿದರೂ ಕೂಡ ಶಾಸಕ ರೆಡ್ಡಿ, ಪೊಲೀಸರ ಭದ್ರತೆ ಬೇಧಿಸಿಕೊಂಡು ಹೋಗಿದ್ದಾರೆ. ಕೊಂಚ ಯಾಮಾರಿದ್ದರೂ ಊಹಿಸಲಾಗದ ಅನಾಹುತ, ಅಪಾಯ ಸಂಭವಿಸುತಿತ್ತು. ಏನಾದರೂ ಆಗಿದ್ದರೆ ಅದಕ್ಕೆ ಹೊಣೆ ಯಾರು?" ಎಂದು ತಂಗಡಗಿ ಪ್ರಶ್ನಿಸಿದರು.
"ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಶಾಸಕರೇ ಈ ರೀತಿ ವರ್ತಿಸಿದರೆ, ಜನರಿಗೆ ಏನು ಸಂದೇಶ ಕೊಟ್ಟಂತಾಗುತ್ತದೆ. ಈ ಹಿಂದೆ ರೆಡ್ಡಿಯೂ ಸಚಿವ ಸ್ಥಾನ ನಿಭಾಯಿಸಿ ಬಂದಿರುವ ವ್ಯಕ್ತಿ ಅಲ್ಲವೇ. ಈ ಬಗ್ಗೆ ಕೊಂಚವಾದರೂ ಜವಾಬ್ದಾರಿತನ ಪ್ರದರ್ಶನ ಮಾಡಬೇಕಿತ್ತು. ಇದೇ ಯಾರಾದರೂ ಜನಸಾಮಾನ್ಯರು ಮಾಡಿದ್ದರೆ ಸುಮ್ಮನೆ ಬಿಡಲಾಗುತ್ತಿತ್ತೆ? ಈ ಬಗ್ಗೆ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್ಪಿ, ಗಂಗಾವತಿ ಡಿವೈಎಸ್ಪಿಗೆ ಸೂಚನೆ ನೀಡಲಾಗಿದೆ. ರೆಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದರು.
ಇದನ್ನೂ ಓದಿ: ಸಿಎಂ ಆಗಮನಕ್ಕಾಗಿ ಜನಾರ್ದನ ರೆಡ್ಡಿ ಕಾರಿಗೆ ತಡೆ: ಡಿವೈಡರ್ ಹತ್ತಿಸಿಕೊಂಡು ತೆರಳಿದ ಶಾಸಕ - Janardhan Reddy