ಶ್ರೀನಗರ : ಜೂನ್ 24ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಜಮ್ಮು-ಕಾಶ್ಮೀರದ ಪ್ರಮುಖ ರಾಜಕೀಯ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಈ ಬೆನ್ನಲ್ಲೇ ಪಿಎಜಿಡಿ(ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್)ಯಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳು ಹರಡಿವೆ.
ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಡೆಮಾಕ್ರಟಿಕ್ ಪಕ್ಷಗಳು ಪಿಎಜಿಡಿಯ ಪ್ರಮಖ ಬಣಗಳಾಗಿವೆ. ಆದರೆ, ಈ ಪಕ್ಷಗಳ ನಾಯಕರು ಪ್ರಧಾನಿ ಮೋದಿಯನ್ನು ಭೇಟಿಯಾದ ಬಳಿಕ ಪಿಎಜಿಡಿಯಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎನ್ನಲಾಗಿದೆ.
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯ ಕೆಲ ವೈಯಕ್ತಿಕ ನಿರ್ಧಾರಳಿಂದಾಗಿ ಜೂನ್ 28ರಂದು ನಿಗದಿಯಾಗಿದ್ದ ಗುಪ್ಕರ್ ಅಲಯನ್ಸ್ ಸಭೆ ರದ್ದುಗೊಂಡಿದೆ. ಆದರೆ, ಅದೇ ದಿನ, ದಕ್ಷಿಣ ಕಾಶ್ಮೀರದ ಟ್ರಾಲ್ ಪ್ರದೇಶದಲ್ಲಿ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಕುಟುಂಬಕ್ಕೆ ಸಾಂತ್ವನ ಹೇಳಲು ಮೆಹಬೂಬಾ ಮುಫ್ತಿ ತೆರಳಿದ್ದರು.
370ನೇ ವಿಧಿ ರದ್ಧತಿ ವಿಚಾರ, ಜಮ್ಮು-ಕಾಶ್ಮೀರದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂವಾದದ ಕುರಿತು ನಡೆದ ಚರ್ಚೆ ಈ ಬೆಳವಣಿಗೆಗೆ ಕಾರಣ ಎನ್ನಲಾಗ್ತಿದೆ. ಸಭೆಯ ನಂತರ ಮಾತನಾಡಿದ್ದ ಮುಫ್ತಿ, 370ನೇ ವಿಧಿ ಪುನಃಸ್ಥಾಪಿಸಲು ಮತ್ತು ಕಾಶ್ಮೀರ ವಿಷಯದ ಬಗ್ಗೆ ಪಾಕಿಸ್ತಾನದ ಜತೆ ಮಾತುಕತೆ ನಡೆಸಲು ಕೇಂದ್ರವನ್ನು ಒತ್ತಾಯಿಸಿದ್ದೇವೆ ಎಂದಿದ್ದಾರೆ.
ಆದರೆ, ಎನ್ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಪಾಕ್ನೊಂದಿಗೆ ಯಾವುದೇ ಮಾತುಕತೆ ನಡೆಸುವಂತೆ ನಾವೇನು ಪ್ರಸ್ತಾಪಿಸಿಲ್ಲ ಎಂದರು. ಆರ್ಟಿಕಲ್ 370ರ ವಿಧಿ ಪುನರ್ ಸ್ಥಾಪನೆ ಕುರಿತು ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಈ ವಿಷಯವು ಸುಪ್ರೀಂಕೋರ್ಟ್ನಲ್ಲಿದೆ ಎಂದರು.
2019ರ ಆಗಸ್ಟ್‌ನಲ್ಲಿ 370ನೇ ವಿಧಿ ರದ್ಧತಿಯಾಯಿತು. ಆ ಬಳಿಕ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳ ಸಂಘಟನೆಯಾಗಿ 2020ರ ಅಕ್ಟೋಬರ್ 15ರಂದು ಪಿಎಜಿಡಿ ರಚನೆಯಾಯಿತು. ಈ ಮಧ್ಯೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ನಾವು ಯಾವಾಗಲೂ ಪಿಎಜಿಡಿಯ ಭಾಗವಾಗಿರುತ್ತೇವೆ ಎಂದಿದ್ದಾರೆ. ಆದರೆ, ಪರಿಸ್ಥಿತಿ ಮೊದಲಿನಂತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.