ನವದೆಹಲಿ: ಕೋವಿಡ್ ಹಾವಳಿ ಹೆಚ್ಚಾಗಿರುವ ಸಮಯದಿಂದಲೂ ಪ್ರಧಾನಿಗೆ ಪತ್ರ ಬರೆಯುತ್ತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇದೀಗ ಮತ್ತೊಂದು ಪತ್ರ ರವಾನೆ ಮಾಡಿದ್ದು, ಬ್ಲಾಕ್ ಫಂಗಸ್ಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಕೋರಿದ್ದಾರೆ.
ಪ್ರಧಾನಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ಈ ಸೋಂಕಿಗೊಳಗಾಗಿರುವ ರೋಗಿಗಳಿಗೆ ತ್ವರಿತ ಗತಿಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಈ ಕಪ್ಪು ಶಿಲೀಂದ್ರ ಸೇರಿಸಿಲ್ಲ. ಇದರ ಜತೆಗೆ ಅನೇಕ ಆರೋಗ್ಯ ವಿಮಾ ಯೋಜನೆಗಳಲ್ಲಿ ಸೇರಿಸಿಲ್ಲ. ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಅವರು ತಿಳಿಸಿದ್ದಾರೆ. ಇದರ ಜತೆಗೆ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ದೇಶದಲ್ಲಿ ಅಗತ್ಯವಾದ ಔಷಧ ಕಂಡು ಬರುತ್ತಿಲ್ಲ. ಇದಕ್ಕೆ ಬೇಕಾಗಿರುವ ಔಷಧಗಳ ಉತ್ಪಾದನೆ ಹಾಗೂ ಪೂರೈಕೆ ಬಗ್ಗೆ ಕೇಂದ್ರ ಸರ್ಕಾರ ನಿಗಾ ವಹಿಸಬೇಕು. ಬ್ಲ್ಯಾಕ್ ಫಂಗಸ್ ಔಷಧ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಪ್ಪಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಕೋವಿಡ್ನಿಂದ ಅನಾಥವಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ; ಪ್ರಧಾನಿಗೆ ಸೋನಿಯಾ ಪತ್ರ
ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿಗೆ ಪತ್ರ ಬರೆದಿದ್ದ ಸೋನಿಯಾ ಗಾಂಧಿ,ಕೋವಿಡ್ನಿಂದಾಗಿ ಪೋಷಕರು ಅಥವಾ ಕುಟುಂಬದಲ್ಲಿ ಕೆಲಸ ಮಾಡ್ತಿದ್ದ ಸದಸ್ಯರನ್ನ ಕಳೆದುಕೊಂಡಿರುವ ಮಕ್ಕಳಿಗೆ ನವೋದಯ ವಿದ್ಯಾಲಯದಲ್ಲಿ ಉಚಿತವಾಗಿ ಶಿಕ್ಷಣ ನೀಡುವಂತೆ ಕೋರಿ ಅವರು ಪತ್ರ ಬರೆದಿದ್ದರು.