ಹೈದರಾಬಾದ್: ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ನೆರೆರಾಜ್ಯ ತೆಲಂಗಾಣದಲ್ಲೂ 6 ಗ್ಯಾರಂಟಿಗಳನ್ನು ಘೋಷಿಸಿದೆ. ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಇಂದು (ಭಾನುವಾರ) ಜನರಿಗೆ ನೀಡಬಯಸುವ ಯೋಜನೆಗಳ ಬಗ್ಗೆ ಪ್ರಕಟಿಸಿದರು.
ಹೈದರಾಬಾದ್‌ನ ತುಕ್ಕುಗುಡದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, ತೆಲಂಗಾಣದಲ್ಲಿ ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವ ಕಾಂಗ್ರೆಸ್ ಸರ್ಕಾರವನ್ನು ನೋಡುವುದು ನನ್ನ ಕನಸು. ಹೀಗಾಗಿ ನಾವು 6 ಗ್ಯಾರಂಟಿಗಳನ್ನು ನೀಡುತ್ತಿದ್ದೇವೆ. ಅವೆಲ್ಲವನ್ನೂ ಈಡೇರಿಸಲು ನಾವು ಬದ್ಧರಾಗಿದ್ದೇವೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಮಹಾಲಕ್ಷ್ಮಿ ಗ್ಯಾರಂಟಿ ಅಡಿಯಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು, 500 ರೂ.ಗೆ ಗ್ಯಾಸ್ ಸಿಲಿಂಡರ್ ಮತ್ತು ರಾಜ್ಯಾದ್ಯಂತ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುವುದು ಎಂದು ಅವರು ಕೆಲವು ಖಾತ್ರಿಗಳನ್ನು ವಿವರಿಸಿದರು.
ವಿಜಯಭೇರಿ ಸಭೆಯಲ್ಲಿ ಕಾಂಗ್ರೆಸ್ ಘೋಷಿಸಿದ 6 ಭರವಸೆಗಳಿವು
1. ಮಹಾಲಕ್ಷ್ಮಿ ಯೋಜನೆ: ಮೊದಲ ಗ್ಯಾರಂಟಿಯಾಗಿ ಮಹಾಲಕ್ಷ್ಮಿ ಯೋಜನೆಯನ್ನು ಘೋಷಿಸಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 2500 ರೂಪಾಯಿ, ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, 500 ರೂಪಾಯಿಗೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗುವುದು ಎಂದಿದೆ.
2. ರೈತ ಭರೋಸಾ ಯೋಜನೆ : ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ರೈತ ಭರೋಸಾ ಯೋಜನೆಯನ್ನು ಘೋಷಿಸಿದರು. ಇದರಡಿ ಎಕರೆಗೆ 15000 ರೂಪಾಯಿ ನೀಡಲಾಗುವುದು. ನಿವೇಶನ ರಹಿತ ಬಡವರು, ರೈತರಿಗೆ ವರ್ಷಕ್ಕೆ 12 ಸಾವಿರ ರೂಪಾಯಿ ನೆರವು. ಪ್ರತಿ ಕ್ವಿಂಟಲ್ ಭತ್ತಕ್ಕೆ 500 ರೂಪಾಯಿ ನೀಡಲಾಗುವುದು.
3. ಗೃಹ ಜ್ಯೋತಿ ಯೋಜನೆ : ಈ ಯೋಜನೆಯಡಿಯಲ್ಲಿ ಗೃಹಬಳಕೆಯ ಅಗತ್ಯಗಳಿಗಾಗಿ 200 ಯೂನಿಟ್ ಉಚಿತ ವಿದ್ಯುತ್ ಒದಗಿಸಲಾಗುವುದು. ತೆಲಂಗಾಣಕ್ಕಾಗಿ ಹೋರಾಟ ಮಾಡಿದವರಿಗೆ 200 ಗಜ ನಿವೇಶನ ನೀಡುವುದಾಗಿ ಘೋಷಿಸಲಾಗಿದೆ.
4. ಇಂದಿರಮ್ಮ ಮನೆ ಯೋಜನೆ : ನಾಲ್ಕನೇಯ ಗ್ಯಾರಂಟಿಯಾಗಿ ಬಡವರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು.
5. ಯುವ ವಿಕಾಸ ಯೋಜನೆ : ಕಾಲೇಜು ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಲಾಗಿದೆ. ಯುವ ವಿಕಾಸಂ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಶುಲ್ಕವನ್ನು ಪಾವತಿಸಲಾಗುವುದು. 2 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಲಾಗಿದೆ.
6. ಚೇಯುತ ಪಿಂಚಣಿ ಯೋಜನೆ : ಆಸರೆ ಯೋಜನೆಯಡಿ ವಿಧವಾ ಮಹಿಳೆಯರು, ಕೈಮಗ್ಗ ಕಾರ್ಮಿಕರು, ಅಂಗವಿಕಲರು ಮತ್ತು ವೃದ್ಧರಿಗೆ 4,000 ಪಿಂಚಣಿ ನೀಡಲಾಗುವುದು. ದಲಿತ ಮತ್ತು ಗಿರಿಜನ ಮತ್ತು ಆದಿವಾಸಿಗಳಿಗೆ 12 ಲಕ್ಷ ರೂ.ಗಳ ಆರ್ಥಿಕ ನೆರವು. ಈ ಯೋಜನೆಯಡಿ 10 ಲಕ್ಷ ರೂ.ವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುವುದು.
ಇದನ್ನೂ ಓದಿ: 2024 ರಲ್ಲಿ ಬಿಜೆಪಿ ಸೋಲಿಸಿ, ಮಹಾತ್ವ ಗಾಂಧಿಗೆ ಗೌರವ ಸಲ್ಲಿಸೋಣ: ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ನಿರ್ಣಯ