ಚಂಡೀಗಢ(ಪಂಜಾಬ್): ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ನೀಡಿ, ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ. 117 ಕ್ಷೇತ್ರಗಳ ಪೈಕಿ 92 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ದೆಹಲಿ ನಂತರ ಪಂಜಾಬ್ನಲ್ಲಿ ಸರ್ಕಾರ ರಚನೆ ಮಾಡಲು ಸನ್ನದ್ಧವಾಗಿದೆ.
ಇದರ ಮಧ್ಯೆ ಘಟಾನುಘಟಿ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿದಿದ್ದ ಸಾಮಾನ್ಯ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿ, ಹೊಸ ಹೊಸ ದಾಖಲೆ ನಿರ್ಮಿಸಿದ್ದಾರೆ. ಆ ಸಾಲಿನಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧ ಗೆಲುವು ಸಾಧಿಸಿರುವ ಮೊಬೈಲ್ ರಿಪೇರಿ ಅಂಗಡಿ ಕೆಲಸಗಾರ ಲಾಭ್ ಸಿಂಗ್ ಉಗೋಕೆ ಸಹ ಸೇರಿದ್ದಾರೆ. ಇವರ ತಾಯಿ ಬಲ್ದೇವ್ ಕೌರ್ ಸರ್ಕಾರಿ ಶಾಲೆಯಲ್ಲಿ ಸಫಾಯಿ ಕರ್ಮಚಾರಿ ಆಗಿ ಕೆಲಸ ಮಾಡ್ತಿದ್ದಾರೆ. ಮಗ ಗೆಲುವಿನ ನಗೆ ಬೀರಿದ್ರೂ ಸಹ ಮರುದಿನವೇ ಕೈಯಲ್ಲಿ ಪೊರಕೆ ಹಿಡಿದು ಶಾಲಾ ಕೆಲಸಕ್ಕೆ ತೆರಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮಗ ಶಾಸಕನಾಗಿ ಆಯ್ಕೆಯಾಗಿದ್ರೂ ಕೂಡ ತಾಯಿ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸವನ್ನು ಮಾತ್ರ ತೊರೆದಿಲ್ಲ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದ ಲಾಭ್ ಸಿಂಗ್ ಉಗೋಕೆ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧ ಬದೌರ್ ಕ್ಷೇತ್ರದಲ್ಲಿ ದೊಡ್ಡ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಫಲಿತಾಂಶ ಹೊರಬಂದ ಮರುದಿನವೇ ಇವರ ತಾಯಿ ಶಾಲೆಗೆ ತೆರಳಿ ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿರಿ: ಮೊಬೈಲ್ ರಿಪೇರಿ ಅಂಗಡಿ ಕೆಲಸಗಾರನ ವಿರುದ್ಧ ಸೋತ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ!
ಈ ವೇಳೆ 'ಈಟಿವಿ ಭಾರತ' ಜೊತೆ ಮಾತನಾಡಿರುವ ನೂತನ ಶಾಸಕ ಲಾಭ್ ಸಿಂಗ್ ಉಗೋಕೆ ಅವರ ತಾಯಿ ಬಲ್ದೇವ್ ಕೌರ್, ಮಗ ಶಾಸಕನಾಗಿರುವುದು ತುಂಬಾ ಸಂತೋಷ. ಆದರೆ, ನಾನು ಕಷ್ಟಪಟ್ಟು ದುಡಿದ ಹಣದಿಂದಲೇ ಇಷ್ಟು ದಿನ ಮನೆ ನಡೆಸಿಕೊಂಡು ಬಂದಿದ್ದೇನೆ. ಬರುವ ದಿನಗಳಲ್ಲೂ ಇದೇ ಕೆಲಸ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಈ ಪ್ರದೇಶದ ಜನರಿಗೆ ನನ್ನ ಮಗನ ಮೇಲೆ ಅಪಾರ ಪ್ರೀತಿ. ಇಲ್ಲಿನ ಜನರಿಗೆ ಆರೋಗ್ಯ, ಶಿಕ್ಷಣ ಮತ್ತು ಇತರೆ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡಲಿ ಎಂದು ಹೇಳಿದ್ದಾರೆ.
ಲಾಭ್ ಸಿಂಗ್ ಉಗೋಕೆ ಅವರ ತಂದೆ ಡ್ರೈವರ್ ಆಗಿದ್ದು, ತಾಯಿ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಲಾಭ್ ಸಿಂಗ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದರು. 2013ರಲ್ಲಿ ಆಮ್ ಆದ್ಮಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸೇರಿದ್ದ ಇವರು, ಇದೀಗ ಶಾಸಕನಾಗಿ ಆಯ್ಕೆಯಾಗಿದ್ದಾರೆ.