ಸೀತಾಪುರ್ (ಉ.ಪ್ರ): ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದೆ. ಈ ಹಿನ್ನೆಲೆ ಸಾವು - ನೋವಿನ ಕುರಿತು ಸಹ ವರದಿಯಾಗುತ್ತಿದೆ. ಇದೀಗ ಕಳೆದ ರಾತ್ರಿ ವಿವಿಧೆಡೆ ಮನೆ ಗೋಡೆ ಕುಸಿದು ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ.
ಮಳೆಯ ಜೊತೆ ಗಾಳಿಯೂ ಇದ್ದು, ಬಿಸ್ವಾನ್, ಮನ್ಪುರ ಪೊಲೀಸ್ ಠಾಣೆ ಪ್ರದೇಶದ ಲಕ್ಷ್ಮಣಪುರ ಗ್ರಾಮದಲ್ಲಿ ಕಚ್ಚಾ ಮನೆ ಗೋಡೆ ಕುಸಿದಿವೆ. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ಅಲ್ಲದೇ ಇಬ್ಬರು ಗಾಯಗೊಂಡಿದ್ದಾರೆ.
ಇನ್ನೊಂದೆಡೆ ಸದರ್ಪುರ್ ಪೊಲೀಸ್ ಠಾಣೆ ಪ್ರದೇಶ ಬಿಲೌಲಿಯಲ್ಲಿ ಕಚ್ಚಾ ಮನೆಯ ಗೋಡೆ ಕುಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ಸ್ಥಳೀಯರ ಸಹಕಾರದಿಂದ ಅವಶೇಷಗಳ ತೆರವು ಮಾಡಿ ಮೃತದೇಹ ಹೊರತೆಗೆಯಲಾಗಿದೆ. ಇದಕ್ಕೂ ಮೊದಲು ಜುಲೈ 10ರಂದು ಮಿಸ್ರಿಖ್ ಕೊಟ್ವಾಲಿಯಲ್ಲಿ ಮನೆ ಗೋಡೆ ಕುಸಿದು ದಂಪತಿ, ಮಗಳು ಮೃತಪಟ್ಟಿದ್ದರು.