ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ಪತನದಂಚಿಗೆ ತಲುಪಿದೆ. ಈ ನಡುವೆ ಶಿವಸೇನೆ ನಾಯಕ, ಸಂಸದ ಸಂಜಯ್ ರಾವುತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಹಾ ವಿಕಾಸ್ ಆಘಾಡಿ ಮೈತ್ರಿಯಿಂದ ಹೊರಬರಲು ಉದ್ಧವ್ ಠಾಕ್ರೆ ಬಣ ಸಿದ್ಧವಾಗಿದೆ. ಆದರೆ, ಪಕ್ಷದ ಬಂಡಾಯ ಶಾಸಕರು 24 ಗಂಟೆಗಳಲ್ಲಿ ಮುಂಬೈಗೆ ಬರಬೇಕೆಂದು ಷರತ್ತು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಶಾಸಕರು ಗುವಾಹಟಿಯಿಂದ ಮಾತುಕತೆ ನಡೆಸಬಾರದು. ಅವರು ಮುಂಬೈಗೆ ಬಂದು ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕು. ಇದು ಎಲ್ಲ ಶಾಸಕರ ಇಚ್ಛೆಯಾಗಿದ್ದರೆ, ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಹೊರಬರುವುದನ್ನು ಪರಿಗಣಿಸಲು ನಾವು ಸಿದ್ಧ. ಆದರೆ ಅದಕ್ಕಾಗಿ ಶಾಸಕರು ಮುಂಬೈಗೆ ಬಂದು ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಬೇಕೆಂದು ಹೇಳಿದ್ದಾರೆ.
ಇದೇ ವೇಳೆ, ಗುವಾಹಟಿಯ 21 ಶಾಸಕರು ಉದ್ಧವ್ ಠಾಕ್ರೆ ಬಣವನ್ನು ಸಂಪರ್ಕಿಸಿದ್ದಾರೆ. ಮುಂಬೈಗೆ ಮರಳಿದ ನಂತರ ಆ ಶಾಸಕರು ನಮ್ಮೊಂದಿಗೆ ಇರಲಿದ್ದಾರೆ ಎಂದು ರಾವುತ್ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ ಬಂಗಲೆ' ಅತಿ ಶೀಘ್ರದಲ್ಲಿ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ.
ಇತ್ತ, ಶಿವಸೇನೆಯ ಮತ್ತೊಬ್ಬ ಸಂಸದ ವಿನಾಯಕ್ ರಾವುತ್ ಸಹ ಗುವಾಹಟಿಯಲ್ಲಿರುವ ಕನಿಷ್ಠ 18 ಶಾಸಕರು ಮುಂಬೈನಲ್ಲಿರುವ ನಮ್ಮ ನಾಯಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೇ, ಅವರಲ್ಲಿ ಹಲವರು ಶೀಘ್ರದಲ್ಲೇ ಮುಂಬೈಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್-ಎನ್ಸಿಪಿ ದಿಢೀರ್ ಸಭೆ: ಮೈತ್ರಿಯಿಂದ ಹೊರಬರಲು ಶಿವಸೇನೆ ಸಿದ್ಧ ಎಂಬ ಸಂಜಯ್ ರಾವುತ್ ಹೇಳಿಕೆಯ ಬೆನ್ನಲ್ಲೇ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್ಸಿಪಿ ಪ್ರತ್ಯೇಕ ಸಭೆ ಕರೆದಿವೆ. ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆಯುವ ಈ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಮಹಾರಾಷ್ಟ್ರ ಉಸ್ತುವಾರಿ ಎಚ್.ಕೆ.ಪಾಟೀಲ್, ಬಾಳಾಸಾಹೇಬ್ ಥೋರಟ್, ನಾನಾ ಪಟೋಳೆ, ಅಶೋಕ್ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಎನ್ಸಿಪಿ ಕೂಡ ತನ್ನ ನಾಯಕ ಸಭೆ ಕರೆದಿದೆ. ವೈ.ಬಿ.ಚವ್ಹಾಣ್ ಸೆಂಟರ್ನಲ್ಲಿ ಶಾಸಕರು ಸಭೆ ಸೇರಲಿದ್ದು, ಪಕ್ಷದ ವರಿಷ್ಠ ಶರದ್ ಪವಾರ್ ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಏಕನಾಥ್ ಶಿಂದೆ ಮುಂದಿರುವ ಆಯ್ಕೆಗಳೇನು? ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಾ ಹೊಸ ಸರ್ಕಾರ?