ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಮುಂದೆ ಹನುಮಾನ್ ಚಾಲೀಸ್ ಪಠಣೆ ಮಾಡುವುದಾಗಿ ಘೋಷಿಸಿ, ಇದೀಗ ಬಂಧನಕ್ಕೊಳಗಾಗಿರುವ ಸಂಸದೆ ನವನೀತ್ ಕೌರ್ ಹಾಗೂ ಪತಿ ರವಿ ರಾಣಾ ಅವರಿಗೆ ಜೈಲಿನೊಳಗೆ ಹಾಕಲಾಗಿದೆ. ಇದರ ಮಧ್ಯೆ ಸಂಸದೆ ಕೌರ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಸಾರ್ವಜನಿಕರಿಗೆ ದ್ರೋಹ ಎಸಗುತ್ತಿದ್ದು, ಕಾಂಗ್ರೆಸ್ - ಎನ್ಸಿಪಿ ಜೊತೆ ಮೈತ್ರಿ ಮಾಡಿಕೊಂಡ ಬಳಿಕ ತನ್ನ ಹಿಂದುತ್ವ ತತ್ವಗಳಿಂದ ಸಂಪೂರ್ಣವಾಗಿ ದೂರ ಸರಿದಿದೆ ಎಂಬುದು ನನ್ನ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ನಂಬಿಕೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಇದೀಗ ಸಾರ್ವಜನಿಕರಿಗೆ ದ್ರೋಹ ಮಾಡ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮುಂಬೈನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ 'ಮಾತೋಶ್ರೀ' ಹೊರಗೆ ಹನುಮಾನ್ ಚಾಲೀಸಾ ಪಠಣಕ್ಕೆ ಕರೆ ನೀಡಿದ ನಂತರ ದಂಪತಿಯನ್ನು ಶನಿವಾರ ಪೊಲೀಸರು ಬಂಧನ ಮಾಡಿದ್ದರು. ಇದರ ಬೆನ್ನಲ್ಲೇ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಅಮರಾವತಿ ಸಂಸದೆ ನವನೀತ್ ರಾಣಾ ಅವರನ್ನು ಬೈಕುಲ್ಲಾ ಮಹಿಳಾ ಜೈಲಿಗೆ ಸ್ಥಳಾಂತರಿಸಿದರೆ, ಅವರ ಪತಿ ಶಾಸಕ ರವಿ ರಾಣಾ ಅವರನ್ನು ನವಿ ಮುಂಬೈನ ತಲೋಜಾ ಜೈಲಿಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸುವ ಸವಾಲು : ಗಂಡ-ಹೆಂಡ್ತಿಯನ್ನು ಬೇರೆ ಬೇರೆ ಜೈಲಿಗೆ ರವಾನಿಸಿದ ಮುಂಬೈ ಪೊಲೀಸರು!
'ನೀವೂ ಹನುಮಾನ್ ಚಾಲೀಸಾ ಪಠಿಸಬೇಕು. ಇಲ್ಲ ನಾವೇ ನಿಮ್ಮ ಮನೆ ಮುಂದೆ ಹನುಮಾನ್ ಚಾಲೀಸ್ ಪಠಣ' ಮಾಡುತ್ತೇವೆ ಎಂದು ಕಳೆದ ಕೆಲ ದಿನಗಳ ಹಿಂದೆ ನವನೀತ್-ರಾಣಾ ದಂಪತಿ ಸಿಎಂಗೆ ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಮುಂಬೈಗೆ ಆಗಮಿಸಿದ್ದರು. ಆದರೆ, ತಮ್ಮ ನಿರ್ಧಾರ ರದ್ದು ಮಾಡುತ್ತಿರುವುದಾಗಿ ಅವರು ಘೋಷಣೆ ಕೂಗಿದ್ದರು.
ಇದರ ಬೆನ್ನಲ್ಲೇ ಅವರನ್ನು ಪೊಲೀಸರು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಬಾಂದ್ರಾ ನ್ಯಾಯಾಲಯದ ರಜಾ ಪೀಠವು 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಸೆಕ್ಷನ್ 34, 124A (ದೇಶದ್ರೋಹ), 153A (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು ಮತ್ತು IPC ಮತ್ತು ಸೆಕ್ಷನ್ 37(1)ದ ಸೌಹಾರ್ದತೆ ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಮತ್ತು ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯಿದೆಯ 135 ಸೆಕ್ಷನ್ ಪ್ರಕಾರ ಬಂಧನ ಮಾಡಲಾಗಿತ್ತು.