ಮುಂಬೈ (ಮಹಾರಾಷ್ಟ್ರ): ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಶಿವಸೇನಾ ಮುಖ್ಯಸ್ಥ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಶರದ್ ಪವಾರ್ ಈ ವಾರದ ಮೂರು ದಿನಗಳಲ್ಲಿ ಎರಡು ಬಾರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ. ಆದ್ದರಿಂದ, ಠಾಕ್ರೆ ಮತ್ತು ಪವಾರ್ ನಡುವಿನ ಈ ಭೇಟಿ ರಾಜ್ಯ ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಅವರನ್ನು ಸಿಎಂ ಅಧಿಕೃತ ನಿವಾಸ ವರ್ಷ ಬಂಗಲೆಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದಾರೆ. ಭೇಟಿಯು ಬಿಸಿಬಿಸಿ ಚರ್ಚೆಗಳನ್ನು ಹುಟ್ಟುಹಾಕಿದೆ. ಸದ್ಯ ರಾಜ್ಯದಲ್ಲಿ ಡ್ರಗ್ಸ್ ಪಾರ್ಟಿ ಕೇಸ್ ವಿಚಾರ ಸುದ್ದಿಯಲ್ಲಿದೆ. ಹೀಗಾಗಿ ನಟ ಶಾರುಖ್ ಖಾನ್ ತಮ್ಮ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಕೊಡಿಸಲು ಯತ್ನಿಸುತ್ತಿದ್ದಾರೆ.
ಮತ್ತೊಂದೆಡೆ, ಎನ್‌ಸಿಪಿ ವಕ್ತಾರ ಮತ್ತು ಅಲ್ಪಸಂಖ್ಯಾತ ಸಚಿವ ನವಾಬ್ ಮಲಿಕ್ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ನಡುವಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಇದರ ಹೊರತಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಾದ ಮುಂಬೈ ಮತ್ತು ಇತರ ನಗರಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿದೆ. ದೀಪಾವಳಿಗೆ ಮುನ್ನ ರಾಜ್ಯದಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಇದಲ್ಲದೇ ಮಹಾವಿಕಾಸ್ ಅಘಾಡಿಯ ವಿವಿಧ ಮುಖಂಡರನ್ನು ಕೇಂದ್ರ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿದೆ. ಪವಾರ್ ಕುಟುಂಬಕ್ಕೆ ಸೇರಿದ ಕಾರ್ಖಾನೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆದ್ದರಿಂದ, ಉಭಯ ನಾಯಕರ ಸಭೆಯಲ್ಲಿ ಇದನ್ನು ಹೇಗೆ ಎದುರಿಸುವುದು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ.