ಬಾರ್ಮರ್ (ರಾಜಸ್ಥಾನ): ಬಾರ್ಮರ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲಿ ಮೂವರು ಸಜೀವ ದಹನವಾಗಿದ್ದು, ಒಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ.
ಎರಡೂ ಲಾರಿಗಳು ಬೆಂಕಿಗೆ ಆಹುತಿ: ಗುಡಮಲಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಅದರಂ ಪೆಟ್ರೋಲ್ ಪಂಪ್ ಬಳಿ ಎರಡು ಲಾರಿಗಳ ನಡುವೆ ಮುಖಾಮುಖಿ ಘರ್ಷಣೆ ಸಂಭವಿಸಿದೆ ಎಂದು ಹೆಡ್ ಕಾನ್‌ಸ್ಟೇಬಲ್ ಸುಲ್ತಾನ್ ಸಿಂಗ್ ಹೇಳಿದ್ದಾರೆ. ಅಪಘಾತ ಎಷ್ಟು ಭೀಕರವಾಗಿತ್ತು ಎಂದರೆ ಡಿಕ್ಕಿಯ ನಂತರ ಎರಡೂ ಲಾರಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಎರಡು ಲಾರಿಗಳಲ್ಲಿ ಒಟ್ಟು 4 ಜನರಿದ್ದರು. ಈ ಪೈಕಿ ಪ್ರದೀಪ್ ಅವರ ಪುತ್ರ ರಾಮಚಂದ್ರ ಲಾರಿನಲ್ಲಿ ಸಿಲುಕಿ ಸಜೀವ ದಹನಗೊಂಡರೆ, ನೋಖಾ ಬಿಕಾನೇರ್ ನಿವಾಸಿ ಲಕ್ಷ್ಮಣ್ ಅವರ ಪುತ್ರ ಭರ್ಮಲ್ರಾಮ್ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ರವಾನಿಸಲಾಗಿದೆ. 2ನೇ ಲಾರಿಯಲ್ಲಿದ್ದ ಚಾಲಕ ಮೊಹಮ್ಮದ್‌ನ ಮಗ ಸಾಮು ಖಾನ್‌ನೊಂದಿಗೆ, ಇನ್ನೊಬ್ಬ ವ್ಯಕ್ತಿ ಸಜೀವ ದಹನಗೊಂಡಿದ್ದಾರೆ. ಆತನ ಗುರುತು ಪತ್ತೆಯಾಗಿಲ್ಲ ಎಂದು ಸುಲ್ತಾನ್ ಸಿಂಗ್ ಹೇಳಿದ್ದಾರೆ.
ಒಂದು ಲಾರಿ ಮಣ್ಣನ್ನು ತುಂಬಿಕೊಂಡು ಬಿಕಾನೇರ್‌ನಿಂದ ಸಂಚೋರ್ ಕಡೆಗೆ ಹೋಗುತ್ತಿದ್ದರೆ, ಇನ್ನೊಂದು ಲಾರಿ ಟೈಲ್ಸ್‌ಗಳಿಂದ ತುಂಬಿತ್ತು. ಸದ್ಯ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಉಪ ಅಧೀಕ್ಷಕ ಶುಭಕರನ್ ಖಿಚಿ ತಿಳಿಸಿದ್ದಾರೆ.
ಇದನ್ನೂ ಓದಿ: ಮುಂಬೈ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಾಲ್ವರು ಸಾವು, 22 ಮಂದಿಗೆ ಗಾಯ
ರಸ್ತೆ ಸಂಚಾರಕ್ಕೆ ಅಡಚಣೆ: ಘಟನೆ ಸಂಭವಿಸಿದ ನಂತರ ದಾರಿ ಹೋಕರ ಗುಂಪು ಸ್ಥಳದಲ್ಲಿ ಜಮಾಯಿಸಿತು. ಬೆಂಕಿಯ ಜ್ವಾಲೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಹೆದ್ದಾರಿಯಲ್ಲಿ ಕೆಲ ತಾಸುಗಳ ಕಾಲ ವಾಹನಗಳ ಸಾಲು ನಿಂತಿತ್ತು. ಮಾಹಿತಿ ಮೇರೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಿಸಿ ಸಂಚಾರ ಸುಗಮಗೊಳಿಸಿದರು. ಇನ್ನು ಸ್ಥಳೀಯ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆಯಲ್ಲಿ ಸುಟ್ಟಗಾಯಗಳೊಂದಿಗೆ ಪಾರಾದ ವ್ಯಕ್ತಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
7 ಮಂದಿ ದುರ್ಮರಣ: ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯಲ್ಲಿ ಭಾನುವಾರ(ಏ.23) ಬೆಳಗ್ಗೆ ಭೀಕರ ದುರಂತ ಸಂಭವಿಸಿದೆ. ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಪಂಜಾಬ್‌ನ ಒಕಾರಾದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 7 ಮಂದಿ ದುರ್ಮರಣ